ಚೆನ್ನೈ (ತಮಿಳುನಾಡು): ಬಹುಜನ ಸಮಾಜ ಪಕ್ಷದ ತಮಿಳುನಾಡು ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರನ್ನು 6 ಜನರ ಅಪರಿಚಿತ ತಂಡವು ನಿನ್ನೆ(ಶುಕ್ರವಾರ) ಚೆನ್ನೈನ ಪೆರಂಬೂರ್ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಿತ್ತು. ಶನಿವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅವರ ಅಂತ್ಯ ಸಂಸ್ಕಾರವನ್ನು ಭಾನುವಾರ ನೆರವೇರಲಿದೆ.
ಸದ್ಯ ಚೆನ್ನೈ ಪೊಲೀಸರು ಪ್ರಕರಣ ಸಂಬಂಧ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರ್ಮ್‌ಸ್ಟ್ರಾಂಗ್ ಅವರ ಹತ್ಯೆಯು ಆಡಳಿತಾರೂಢ ಡಿಎಂಕೆ ಪಕ್ಷದ ವಿರುದ್ಧ ಆಕ್ರೋಶಕ್ಕೆ ಭುಗಿಲೇಳುವಂತೆ ಮಾಡಿದೆ. ಏಕೆಂದರೆ ಹತ್ಯೆಯಾದ ನಾಯಕನ ಬೆಂಬಲಿಗರು ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಸರ್ಕಾರವನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಆದರೆ, ಪೊಲೀಸರು, ಹತ್ಯೆ ರಾಜಕೀಯ ಉದ್ದೇಶದಿಂದ ನಡೆದಿದೆ ಎಂಬ ಆರೋಪ ತಳ್ಳಿಹಾಕಿದ್ದಾರೆ.
ಯಾರೀ ಕೆ ಆರ್ಮ್‌ಸ್ಟ್ರಾಂಗ್?: ಚೆನ್ನೈ ಮೂಲದ ಆರ್ಮ್‌ಸ್ಟ್ರಾಂಗ್ ಪೆರಂಬೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ವಾಸವಾಗಿದ್ದರು. ಅವರ ತಂದೆ ಪೆರಿಯಾರ್, ಅವರು ದ್ರಾವಿಡ ಕಳಗಂ ಬೆಂಬಲಿಗರಾಗಿದ್ದರು. ಶಾಲಾ ದಿನಗಳಿಂದಲೂ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದ ಆರ್ಮ್‌ಸ್ಟ್ರಾಂಗ್ ತಿರುಪತಿ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಮಾಡಿ ಕೆಲ ಕಾಲ ವಕೀಲರಾಗಿ ಕೆಲಸ ನಿರ್ವಹಿಸಿದ್ದರು.
2000 ದಿಂದ ಅವರು ರಾಜಕೀಯ ಪ್ರಾರಂಭಿಸಿದರು ಮತ್ತು ಪೂವೈ ಮೂರ್ತಿ ಅವರ ನೇತೃತ್ವದಲ್ಲಿ ಪುರಚಿ ಭಾರತಂ ಪಕ್ಷ ಸೇರಿದರು. ಪೂವೈ ಮೂರ್ತಿ ಅವರ ನಿಧನದ ನಂತರ 2006ರಲ್ಲಿ ಪಕ್ಷ ತೊರೆದು ಆ ಭಾಗದ ಯುವಕರೊಂದಿಗೆ ಸೇರಿ ಡಾ.ಭೀಮರಾವ್ ದಲಿತ ಚಳವಳಿ ಎಂಬ ಸಂಘಟನೆ ಆರಂಭಿಸಿದ್ದರು. ನಂತರ 2006ರಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಚೆನ್ನೈ ಮಹಾನಗರ ಪಾಲಿಕೆಯ 99ನೇ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ನಂತರ, ಅವರು ಬಹುಜನ ಸಮಾಜ ಪಕ್ಷಕ್ಕೆ ಸೇರಿದರು. 2007 ರಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು, ಅವರು ಹತ್ಯೆಯಾಗುವವರೆಗೂ ಇದೇ ಹುದ್ದೆಯಲ್ಲಿದ್ದರು. 2006ರ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಕರಣ ಸಂಬಂಧ 2007ರಲ್ಲಿ ಮದ್ರಾಸ್ ಹೈಕೋರ್ಟ್ ತೀರ್ಪಿನ ನಂತರ, ಅಂದಿನ ಡಿಎಂಕೆ ಅಧ್ಯಕ್ಷ ಕರುಣಾನಿಧಿ ಅವರ ಆದೇಶದ ಮೇರೆಗೆ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳ 98 ಕೌನ್ಸಿಲರ್‌ಗಳು ರಾಜೀನಾಮೆ ನೀಡಿದ್ದರು. ಆ ಸಮಯದಲ್ಲಿ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದ ಬಹುಜನ ಸಮಾಜ ಪಕ್ಷದ ಕೌನ್ಸಿಲರ್ ಆರ್ಮ್‌ಸ್ಟ್ರಾಂಗ್ ರಾಜೀನಾಮೆ ನೀಡಲು ನಿರಾಕರಿಸಿದ್ದರು.
ಬಳಿಕ 2011ರ ವಿಧಾನಸಭಾ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಲ್ಲಿ ಎಂ.ಕೆ.ಸ್ಟಾಲಿನ್ ವಿರುದ್ಧ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಮತ ಪಡೆದು ಎಲ್ಲರ ಗಮನ ಸೆಳೆದಿದ್ದರು. 2016ರ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದರು. ಆರ್ಮ್‌ಸ್ಟ್ರಾಂಗ್ ವಿವಿಧ ಅಪರಾಧ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದರು. ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದ ಅವರು ತಮ್ಮ ಮೇಲಿನ ಎಲ್ಲ ಪ್ರಕರಣಗಳಿಂದ ಖುಲಾಸೆಗೊಂಡಿದ್ದರು. ಆದರೆ, ಅವರ ಹಳೆಯ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತರಾಗಿದ್ದವರು ಬೇರೆ ಬೇರೆ ಗುಂಪುಗಳನ್ನು ಕಟ್ಟಿಕೊಂಡು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು ಎನ್ನಲಾಗಿದೆ.
ಆರ್ಮ್‌ಸ್ಟ್ರಾಂಗ್ ಅವರ ಪಾರ್ಥಿವ ಶರೀರವನ್ನು ಪೆರಂಬೂರ್‌ನ ಖಾಸಗಿ ಶಾಲೆಯ ಆವರಣದಲ್ಲಿ ಇರಿಸಲಾಗಿದ್ದು, ಮುಖಂಡರು ಮತ್ತು ಸಂಬಂಧಿಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಭಾನುವಾರ ಬೆಳಗ್ಗೆ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ಆರ್ಮ್‌ಸ್ಟ್ರಾಂಗ್ ಅವರಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಪ್ರಮುಖರು ಆರ್ಮ್‌ಸ್ಟ್ರಾಂಗ್ ಸಾವಿಗೆ ಸಂತಾಪ ಸೂಚಿಸಿ ಹತ್ಯೆ ಖಂಡಿಸಿದ್ದಾರೆ.
ಇದನ್ನೂ ಓದಿ: ಬಹುಜನ ಸಮಾಜ ಪಕ್ಷದ ತಮಿಳುನಾಡು ಘಟಕದ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಹತ್ಯೆ