ಚುರು, ರಾಜಸ್ಥಾನ: ತಾನು ದೆಹಲಿ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಕಳೆದ ಮೂರು ವರ್ಷಗಳಿಂದ ಅನೇಕ ನಿರುದ್ಯೋಗಿಗಳನ್ನು ವಂಚಿಸಿದ ಯುವತಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
24ವರ್ಷದ ಅಂಜು ಶರ್ಮಾ ಬಂಧಿತ ಯುವತಿ. ದೆಹಲಿ ಪೊಲೀಸ್ ಇನ್ಸ್ಪೆಕ್ಟರ್ ಎಂಬ ಸೋಗಿನಲ್ಲಿ ಸರ್ಕಾರಿ ಕೆಲಸದ ಭರವಸೆ ನೀಡಿ, ಸಂತ್ರಸ್ತರಿಂದ ಹಣ ಪಡೆಯುವಾಗ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ.
ಬಂಧನದ ಕುರಿತು ಎಸ್ಪಿ ಮಾಹಿತಿ ನೀಡಿದ್ದಿಷ್ಟು: ಈ ಕುರಿತು ಮಾತನಾಡಿರುವ ಚುರು ಎಸ್ಪಿ ಜೈ ಯಾದವ್, ದೆಬಗಢ್ ನಿವಾಸಿ ಶರ್ಮಾ, ದೆಹಲಿ ಪೊಲೀಸರ ನಕಲಿ ಐಡಿ ಕಾರ್ಡ್ ತೋರಿಸಿ ಅನೇಕ ವಿಐಪಿ ಸೌಲಭ್ಯವನ್ನು ಪಡೆದಿದ್ದಾರೆ. ಅಲ್ಲದೇ ದೆಹಲಿ, ಜೈಪುರ, ಹರಿಯಾಣದಲ್ಲಿ ಅನೇಕ ನಿರುದ್ಯೋಗಿ ಯುವಕರಿಗೆ ವಂಚಿಸಿದ್ದಾರೆ. ಬಂಧಿತ ಯುವತಿಯಿಂದ ನಕಲಿ ಐಡಿ ಕಾರ್ಡ್ ಜೊತೆಗೆ ಪೊಲೀಸ್ ಯೂನಿಫಾರ್ಮ್ನಲ್ಲಿದ್ದ ಫೋಟೋ ಮತ್ತು ವಿಡಿಯೋವನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಲವರಿಗೆ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ವಂಚನೆ ಆರೋಪ: ಶರ್ಮಾ ದೆಹಲಿ ಪೊಲೀಸ್ ವಿಭಾಗದಲ್ಲಿ ಹೆಡ್ ಕಾನ್ಸ್ಟೇಬಲ್ ವೃತ್ತಿ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ, 12.93 ಲಕ್ಷ ಪಡೆದಿದ್ದಾರೆ. ರಾಜಸ್ಥಾನದ ಚುರು, ಹನುಮನಗಢ, ಫತೇಹಬಾದ್, ಸಿರ್ಸಾ ಮತ್ತು ಪಾಣಿಪತ್ನಲ್ಲೂ ಕೂಡ ಅನೇಕ ಮಂದಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದಿರುವುದು ಬಯಲಾಗಿದೆ.
10ನೇ ತರಗತಿಯಲ್ಲಿ ಮೂರು ಸಲ ಫೇಲ್, ಆದರೆ?: ಶರ್ಮಾ 10ನೇ ತರಗತಿಯಲ್ಲಿ ಮೂರು ಬಾರಿ ಫೇಲ್ ಆಗಿದ್ದು, ವಿಲಾಸಿ ಜೀವನ ನಡೆಸಬೇಕು ಎಂಬ ಉದ್ದೇಶ ಹೊಂದಿದ್ದರು. ಇದಕ್ಕಾಗಿ ಪೊಲೀಸ್ ಅಧಿಕಾರಿಯಾಗಿ ಬಿಂಬಿಸಿಕೊಂಡಿದ್ದಾರೆ ಎಂದು ಎಸ್ಎಚ್ಒ ಅಲ್ಕಾ ಬಿಷ್ಣೋಯಿ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿ ಎಂದು ಹೇಳಿ ಟೋಲ್, ದೇಗುಲ ಮತ್ತು ಪಾರ್ಕಿಂಗ್ ಸೌಲಭ್ಯವನ್ನು ಕೂಡಾ ಯುವತಿ ಪಡೆದುಕೊಂಡಿದ್ದಾಳೆ. ಅಲ್ಲದೇ ಈಕೆ ಅಧಿಕಾರಿಯಾಗಿರುವುದು ನಿಜವೆಂಬಂತೆ ಕುಟುಂಬಸ್ಥರು ಮತ್ತು ಸ್ನೇಹಿತರ ಮುಂದೆ ಬಿಂಬಿಸಿಕೊಂಡಿದ್ದಾಳೆ.
ನೇಮಕಾತಿ ಯೋಜನೆ ಅಡಿ ಅನೇಕರಿಗೆ ವಂಚಿಸಿದ ಕುರಿತು ಶರ್ಮಾ ವಿರುದ್ಧ ದೂರು ಸಲ್ಲಿಕೆಯಾಗಿದ್ದು, ಈ ಬೆನ್ನಲ್ಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಅಂಜು ಶರ್ಮಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಕೆಗೆ ಈ ಕೃತ್ಯದಲ್ಲಿ ಸಹಾಯ ಮಾಡಿದ ಇತರರ ಕುರಿತು ಕೂಡ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದನ್ನೂ ಓದಿ: ಹರಾಜಿನಲ್ಲಿ ಕಡಿಮೆ ಬೆಲೆಗೆ ವಾಹನಗಳನ್ನು ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ ನಕಲಿ ಪೊಲೀಸ್ ಬಂಧನ