ನವದೆಹಲಿ: ಕಾಂಗ್ರೆಸ್ ಸಂಸದ ಮತ್ತು ವಿಶ್ವಸಂಸ್ಥೆಯ ಮಾಜಿ ರಾಜತಾಂತ್ರಿಕ ಶಶಿ ತರೂರ್ ಅವರು ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಗೌರವ 'ಚೆವಲಿಯರ್ ಡೆ ಲಾ ಲೀಜನ್ ಡಿ'ಹಾನರ್'ಗೆ ಭಾಜನರಾಗಿದ್ದಾರೆ. ಇಂಡೋ-ಫ್ರೆಂಚ್ ಸಂಬಂಧಗಳ ವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದನಿಗೆ ಈ ಗೌರವ ನೀಡಲಾಗಿದೆ.
ಇಲ್ಲಿನ ಫ್ರೆಂಚ್ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫ್ರೆಂಚ್ ಸೆನೆಟರ್ ಗೆರಾರ್ಡ್ ಲಾರ್ಚರ್, ತರೂರ್ ಅವರಿಗೆ ಗೌರವವನ್ನು ಪ್ರದಾನ ಮಾಡಿದರು. ಭಾರತ - ಫ್ರಾನ್ಸ್ ಬಾಂಧವ್ಯ ಗಟ್ಟಿಯಾಗಿಸಲು ತರೂರ್ ಅವರ ಅವಿರತ ಪ್ರಯತ್ನಗಳು, ಅಂತಾರಾಷ್ಟ್ರೀಯ ಶಾಂತಿ ಮತ್ತು ಸಹಕಾರಕ್ಕಾಗಿನ ಬದ್ಧತೆ ಗುರುತಿಸಿ ಅತ್ಯುನ್ನತ ಫ್ರೆಂಚ್ ನಾಗರಿಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ತರೂರ್ ಫ್ರಾನ್ಸ್‌ನ ದೀರ್ಘಕಾಲದ 'ಸ್ನೇಹಿತ' ಎಂದು ಭಾರತದಲ್ಲಿನ ಫ್ರೆಂಚ್ ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತರೂರ್ ಅವರು ವಿದೇಶಾಂಗ ವ್ಯವಹಾರಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವರಾಗಿದ್ದರು. ವಿದೇಶಾಂಗ ವ್ಯವಹಾರಗಳು ಮತ್ತು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ಪ್ರಮುಖ ಸಂಸದೀಯ ಸ್ಥಾಯಿ ಸಮಿತಿಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಫ್ರಾನ್ಸ್ ಸರ್ಕಾರ ಈ ಗೌರವವನ್ನು ಕಾಂಗ್ರೆಸ್ ಸಂಸದನಿಗೆ ಘೋಷಿಸಿತ್ತು.
ತರೂರ್ ಫ್ರಾನ್ಸ್‌ನ ಸ್ನೇಹಿತ: ಗೌರವ ಪ್ರದಾನದ ಬಳಿಕ ಮಾತನಾಡಿದ ಫ್ರೆಂಚ್ ಸೆನೆಟರ್ ಗೆರಾರ್ಡ್ ಲಾರ್ಚರ್, 'ಆನ್ ಎರಾ ಆಫ್ ಡಾರ್ಕ್‌ನೆಸ್', 'ಪ್ಯಾಕ್ಸ್ ಇಂಡಿಕಾ' ಮತ್ತು 'ದಿ ಗ್ರೇಟ್ ಇಂಡಿಯನ್ ನಾವೆಲ್' ತರೂರ್ ಬರೆದಿರುವ ಪುಸ್ತಕಗಳ ಪೈಕಿ ಅತ್ಯಂತ ಜನಪ್ರಿಯವಾಗಿವೆ. ಮೂರು ಬಾರಿಯ ಕಾಂಗ್ರೆಸ್ ಸಂಸದರಿಗೆ ಒಲಿದ ಈ ಗೌರವವು ಫ್ರಾಂಕೋ - ಭಾರತೀಯ ಸಂಬಂಧಗಳಿಗೆ ಸಿಕ್ಕ ಮನ್ನಣೆಯಾಗಿದೆ. ತರೂರ್ ಅವರ ಕೆಲವು ಪುಸ್ತಕಗಳು ಫ್ರೆಂಚ್‌ಗೆ ಅನುವಾದಿಸಲಾಗಿದೆ ಎಂದರು.
ರಾಜತಾಂತ್ರಿಕರು, ಲೇಖಕ ಮತ್ತು ರಾಜಕಾರಣಿಯಾಗಿ ತಮ್ಮ ಅತ್ಯುತ್ತಮ ವೃತ್ತಿಜೀವನದ ಮೂಲಕ, ಶಶಿ ತರೂರ್ ಅವರು ಬುದ್ಧಿವಂತಿಕೆಯಿಂದ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾರೆ. ಭಾರತ ಮತ್ತು ಉತ್ತಮ ವಿಶ್ವದ ನಂಟಿಗೆ ಸೇವೆ ಸಲ್ಲಿಸುತ್ತಿದ್ದಾರೆ. ತರೂರ್ ಫ್ರಾನ್ಸ್‌ನ ನಿಜವಾದ ಸ್ನೇಹಿತ. ಫ್ರಾನ್ಸ್ ಮತ್ತು ಅದರ ಸಂಸ್ಕೃತಿಯ ಬಗ್ಗೆ ಹೆಚ್ಚು ತಿಳಿವಳಿಕೆ ಹೊಂದಿರುವ ಫ್ರಾಂಕೋಫೋನ್ ಆಗಿದ್ದಾರೆ. ಈ ಪ್ರಶಸ್ತಿಯ ಮೂಲಕ ಫ್ರೆಂಚ್ ಗಣರಾಜ್ಯವು ತರೂರ್ ಅವರ ಸಾಧನೆ, ಸ್ನೇಹ, ಫ್ರಾನ್ಸ್ ಮೇಲಿನ ಪ್ರೀತಿಯನ್ನು ಗುರುತಿಸುತ್ತದೆ ಎಂದು ಹೇಳಿದರು.
ಗೌರವ ಸಂದಿದ್ದು ಸಂತಸ ತಂದಿದೆ: "ಚೆವಲಿಯರ್ ಡೆ ಲಾ ಲೀಜನ್ ಡಿ'ಹಾನರ್' ಗೌರವ ಸ್ವೀಕರಿಸಿರುವುದು ನನಗೆ ಅಪಾರ ತಂದಿದೆ. ಫ್ರಾನ್ಸ್ ಮತ್ತು ಅದರ ಜನರು, ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಸಿನಿಮಾವನ್ನು ಮೆಚ್ಚುವ ವ್ಯಕ್ತಿಯಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ಇಂಡೋ-ಫ್ರಾನ್ಸ್ ಸ್ನೇಹವನ್ನು ಮತ್ತಷ್ಟು ವೃದ್ಧಿಸುವ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತೇನೆ ಎಂದು ಶಶಿ ತರೂರ್ ಹೇಳಿದರು.
ಇದನ್ನೂ ಓದಿ: ಕರ್ನಾಟಕದ ಪರ ಕಾವೇರಿ ನದಿ ನೀರಿಗಾಗಿ ಹೋರಾಡಿದ್ದ ಹಿರಿಯ ವಕೀಲ ಪಾಲಿ ನಾರಿಮನ್ ನಿಧನ