ನವದೆಹಲಿ: ರಾಷ್ಟ್ರ ರಾಜಧಾನಿಯ ಶಾಲೆಗಳಿಗೆ ಮತ್ತೊಮ್ಮೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಒಂದೇ ವಾರದಲ್ಲಿ ಬಂದ ಎರಡನೇ ಬೆದರಿಕೆ ಕರೆ ಇದಾಗಿದೆ. ಇಂದೂ ಕೂಡ ದೆಹಲಿಯ ಅನೇಕ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶಗಳು ಬಂದಿದ್ದು, ಇದು ದೆಹಲಿ ಜನರ ಆತಂಕಕ್ಕೆ ಕಾರಣವಾಯಿತು. ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಮತ್ತು ಅಗ್ನಿ ಶಾಮಕದಳದ ಅಧಿಕಾರಿಗಳು ಭದ್ರತಾ ಕ್ರಮಕ್ಕೆ ಮುಂದಾಗಿದ್ದು, ತನಿಖೆ ಕೈಗೊಂಡಿದ್ದಾರೆ.
ಬೆದರಿಕೆ ಬಂದ ಶಾಲೆಗಳಲ್ಲಿ ತೀವ್ರ ತಪಾಸಣೆ: ಉತ್ತರ ಕೈಲಾಶ್ನಲ್ಲಿರುವ ಡಿಪಿಎಸ್, ಸಲ್ವಾನ್, ಮಾರ್ಡನ್ ಮತ್ತು ಕೇಂಬ್ರಿಡ್ಜ್ ಶಾಲೆಗಳಿಗೆ ಬೆದರಿಕೆ ಕರೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ಆರಂಭಿಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆದರಿಕೆ ಸಂದೇಶಗಳಲ್ಲಿ ಇರುವುದೇನು?: ಇಮೇಲ್ ಸಂದೇಶದಲ್ಲಿ ಶಾಲೆಯ ಆವರಣದಲ್ಲಿ ಅನೇಕ ಸ್ಫೋಟಕಗಳನ್ನು ಇಡಲಾಗಿದೆ. ಮಕ್ಕಳು ಶಾಲೆಗೆ ಪ್ರವೇಶಿಸುವಾಗ ಸದಾ ಅವರ ಬ್ಯಾಗ್ ತಪಾಸಣೆ ಮಾಡುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಈ ಕೃತ್ಯದಲ್ಲಿ ಸಿಕ್ರೇಟ್ ಡಾರ್ಕ್ ವೆಬ್ ಗ್ರೂಪ್ ಮತ್ತು ಅನೇಕ ರೆಡ್ ರೂಮ್ಗಳು ಚಟುವಟಿಕೆಯಲ್ಲಿ ಭಾಗಿಯಾಗಿವೆ. ಬಾಂಬ್‌ಗಳು ಸ್ಪೋಟಿಸಿದ್ದಲ್ಲಿ ಕಟ್ಟಡಗಳನ್ನು ನಾಶಮಾಡುವ ಮತ್ತು ಜನರಿಗೆ ಹಾನಿ ಮಾಡುವಷ್ಟು ಶಕ್ತಿಯುತವಾಗಿವೆ. ಡಿಸೆಂಬರ್ 13 ಮತ್ತು 14 ರಂದು ನಿಮ್ಮ ಶಾಲೆಯಲ್ಲಿ ಬಾಂಬ್ ಸ್ಪೋಟ ಮಾಡಲಾಗುವುದು ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಸಂದೇಶಕ್ಕೆ ಉತ್ತರಿಸಿ ಇಲ್ಲವೇ ಸ್ಫೋಟ ಎದುರಿಸಿ: ನಮ್ಮ ಬೇಡಿಕೆಗಳಿಗೆ ಒಪ್ಪಿ ಈ ಇಮೇಲ್ ಸಂದೇಶಕ್ಕೆ ಉತ್ತರಿಸಿ, ಇಲ್ಲದಿದ್ದರೆ ಬಾಂಬ್ ಸ್ಪೋಟಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಕೂಡಾ ಇದೇ ವೇಳೆ ನೀಡಲಾಗಿದೆ.
ಬೆದರಿಕೆ ಬಂದ ಶಾಲೆಗಳಿಗೆ ಅಗ್ನಿ ಶಾಮಕದಳ, ಪೊಲೀಸ್ , ಬಾಂಬ್ ಪತ್ತೆ ದಳ ಹಾಗೂ ಡಾಗ್ ಸ್ಕ್ವಾಡ್ ಆಗಮಿಸಿದ್ದು, ಪರಿಶೀಲನೆ ನಡೆಸಿವೆ. ಶಾಲಾ ಆಡಳಿತ ಮಂಡಳಿ ಮಕ್ಕಳ ಸುರಕ್ಷತೆ ಕಾಪಾಡುವ ಹಿನ್ನೆಲೆಯಲ್ಲಿ ಇಂದು ತರಗತಿ ನಡೆಯುವುದಿಲ್ಲ ಎಂದು ತಿಳಿಸಿವೆ.
ಡಿಸೆಂಬರ್ 8ರ ರಾತ್ರಿ 11.38ರ ಸುಮಾರಿಗೆ ದೆಹಲಿಯ ಸುಮಾರು 40ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಇಮೇಲ್ ಸಂದೇಶಗಳು ರವಾನೆಯಾಗಿದ್ದವು. ಶಾಲಾ ಆವರಣದಲ್ಲಿ ಬಾಂಬ್ ಇಡಲಾಗಿದ್ದು, 30,000 ಡಾಲರ್ ಹಣ ನೀಡಿದರೆ, ಬಾಂಬ್ ನಿಷ್ಕ್ರಿಯಗೊಳಿಸಲಾಗುವುದು ಎಂಬ ಬೆದರಿಕೆಯನ್ನು ಹಾಕಲಾಗಿತ್ತು.
ಇದನ್ನೂ ಓದಿ: ಮಾಂತ್ರಿಕನ ಮಾತು ಕೇಳಿ 7 ವರ್ಷದ ಬಾಲಕನ ಕೊಲೆ: ಹಂತಕನ ಬಂಧನ, ತಂತ್ರಿಗಾಗಿ ಹುಡುಕಾಟ