ವಿಶಾಖಪಟ್ಟಣಂ(ಆಂಧ್ರ ಪ್ರದೇಶ): ಪತಿ ತನಗೆ ವಿಚ್ಛೇದನ ನೀಡದೇ ಬೇರೊಬ್ಬ ಮಹಿಳೆಯೊಂದಿಗೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಾಜಿ 'ಮಿಸ್ ವೈಜಾಗ್' ಪಟ್ಟ ಗಿಟ್ಟಿಸಿಕೊಂಡಿದ್ದ ನಕ್ಷತ್ರ ಎಂಬವರು ದೂರು ನೀಡಿದ್ದಾರೆ.
ಪ್ರಕರಣದ ವಿವರ: ನಕ್ಷತ್ರಾ ಎಂಬಾಕೆ 2017ರಲ್ಲಿ ತೇಜಾ ಎಂಬವರನ್ನು ವಿವಾಹವಾಗಿದ್ದರು. ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ ತೇಜಾ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂಬುದು ನಕ್ಷತ್ರ ಮಾಡಿರುವ ಆರೋಪ. ಈ ವಿಚಾರವಾಗಿ ದಂಪತಿಯ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಈ ಮಧ್ಯೆ ಪತಿ ಮಹಿಳೆಯೊಂದಿಗೆ ಇರುವಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ತೆರಳಿದ ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇದಕ್ಕೂ ಹಿಂದೆ, ತೇಜ ಹಾಗೂ ನಕ್ಷತ್ರ ನಡುವೆ ಸಣ್ಣಪುಟ್ಟ ಘರ್ಷಣೆಯೂ ನಡೆದಿದೆ. ಶೂಟಿಂಗ್ ಕಚೇರಿ ಸಮೀಪ ನಕ್ಷತ್ರ ಗಲಾಟೆ ಮಾಡುತ್ತಿದ್ದಾಗ ಪೊಲೀಸರು ಮನವೊಲಿಸಿ ಸ್ಥಳದಿಂದ ಕರೆದೊಯ್ದಿದ್ದರು. ನಕ್ಷತ್ರ ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ತೇಜ ಆರೋಪಿಸಿದ್ದಾರೆ.
"ನಾನು ಮಿಸ್ ವೈಜಾಗ್ ಪ್ರಶಸ್ತಿ ಗೆದ್ದಿದ್ದೇನೆ. 2017ರಲ್ಲಿ ತೇಜಾ ಹಾಗು ನನ್ನ ಪ್ರೇಮ ವಿವಾಹವಾಯಿತು. ಕೆಲಕಾಲ ನಮ್ಮ ಸಂಸಾರ ಚೆನ್ನಾಗಿತ್ತು. ನಮಗೆ ಒಂದು ಮಗುವಿದೆ. ಅಷ್ಟರಲ್ಲಿ ಪತಿಯ ನಡವಳಿಕೆ ಸಂಪೂರ್ಣ ಬದಲಾಯಿತು. ಬೇರೆ ಹುಡುಗಿಯನ್ನು ಮದುವೆಯಾದ ಮಾಹಿತಿ ನನಗೆ ಸಿಕ್ಕಿತು" ಎಂದು ನಕ್ಷತ್ರ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, "ನಾವು ಇನ್ನೂ ವಿಚ್ಛೇದನ ಪಡೆದಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿ ಇರುವಾಗ ಅವರು ಹೇಗೆ ಬೇರೆ ಮಹಿಳೆಯನ್ನು ಮದುವೆಯಾಗುತ್ತಾರೆ?. ತೇಜ ಮಾಡುತ್ತಿರುವುದು ತಪ್ಪು. ನನ್ನ ಪತಿ ಮಹಿಳೆಯೊಂದಿಗೆ ದಾಸ್ಪಲ್ಲ ಹಿಲ್ಸ್‌ನಲ್ಲಿದ್ದಾಗ ನಾನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಂದಿದ್ದೇನೆ. ನನಗೆ ವಂಚಿಸಿದ ತೇಜಾ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಮನವಿ ಮಾಡಿದರು.
ಇನ್ನೊಂದೆಡೆ, ನಕ್ಷತ್ರ ತನ್ನ ಕಚೇರಿಗೆ ಬಂದು ಗಲಾಟೆ ಮಾಡುವುದನ್ನು ತೇಜ ವಿರೋಧಿಸುತ್ತಿದ್ದಾರೆ. ಸಿನಿಮಾ ಆಡಿಷನ್ಗೆ ಬಂದಿದ್ದ ಯುವತಿ ಮೇಲೆ ಆಕೆ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ನಕ್ಷತ್ರ ತನ್ನ ಕಚೇರಿಗೆ ಬಂದು ಜಗಳ ಆರಂಭಿಸಿದಾಗ ತೇಜ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೊಠಡಿ ಪ್ರವೇಶಿಸಿ ಕೊಠಡಿಯಲ್ಲಿದ್ದ ಓರ್ವ ಯುವತಿಯನ್ನು ಅಲ್ಲಿಂದ ಕಳುಹಿಸಿದ್ದರು. ಆದರೆ ಪತ್ನಿಯ ಆರೋಪ ಸುಳ್ಳು ಎಂದು ತೇಜ ಹೇಳುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್, ವಿಮಾನ ನಿಲ್ದಾಣದಲ್ಲಿ ಬಂಧಿಸಿದ SIT - SIT Arrests Prajwal Revanna