ಗುವಾಹಟಿ (ಅಸ್ಸೋಂ): ಈ ವಾರದ ಆರಂಭದಲ್ಲಿ ಸೈಕ್ಲೋನಿಕ್ ಚಂಡಮಾರುತ ರೆಮಲ್ ಪ್ರವೇಶಿಸಿದ್ದರಿಂದ ರಾಜ್ಯವು ಈಗ ಸಂಪೂರ್ಣ ಪ್ರವಾಹದ ಭೀತಿಯಲ್ಲಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ನದಿಗಳು ಮತ್ತು ಉಪನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದಾಗಿ ರಾಜ್ಯದ ಹಲವು ಜಿಲ್ಲೆಗಳು ಜಲಾವೃತಗೊಂಡಿವೆ. ಪ್ರತಿ ದಿನವೂ ಒಂದೊಂದು ಜಿಲ್ಲೆಗಳು ಮತ್ತು ಹೊಸ ಪ್ರದೇಶಗಳು ಪ್ರವಾಹದಿಂದ ಮುಳುಗುತ್ತಿವೆ ಎಂಬುದಾಗಿ ತಿಳಿದು ಬಂದಿದೆ.
ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಇತ್ತೀಚಿನ ಮಾಹಿತಿ ಪ್ರಕಾರ, ರಾಜ್ಯದ ಒಂಬತ್ತು ಜಿಲ್ಲೆಗಳು ಪ್ರಸ್ತುತ ಪ್ರವಾಹದಿಂದ ತತ್ತರಿಸುತ್ತಿವೆ ಮತ್ತು ಸುಮಾರು 2 ಲಕ್ಷ ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಬರಾಕ್‌ನ ಹೈಲಕಂಡಿ ಮತ್ತು ಕರೀಂಗಂಜ್ ಜಿಲ್ಲೆಗಳು ವಿಶೇಷವಾಗಿ ಪ್ರವಾಹದಿಂದ ನಲುಗಿವೆ.
ಮಾಹಿತಿ ಪ್ರಕಾರ, ಕಪಿಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಏತನ್ಮಧ್ಯೆ, ಹವಾಮಾನ ಕೇಂದ್ರದ ಪ್ರಕಾರ, ಅಸ್ಸೋಂ ಮತ್ತು ಈಶಾನ್ಯದಲ್ಲಿ ಐದು ದಿನಗಳ ಕಾಲ ಮಳೆ ಮುಂದುವರಿಯಲಿದೆ. 30-40 ಕಿಲೋಮೀಟರ್ ವೇಗದಲ್ಲಿ ಚಂಡಮಾರುತ ಬೀಸುವುದಲ್ಲದೇ, ಸಿಡಿಲು, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ರಾಜ್ಯದ 9 ಜಿಲ್ಲೆಗಳು ಪ್ರವಾಹದ ಹಿಡಿತದಲ್ಲಿ : ರಾಜ್ಯದ ನಾಗಾಂವ್, ಹೈಲಕಂಡಿ, ಪಶ್ಚಿಮ ಕರ್ಬಿ ಅಂಗ್ಲಾಂಗ್, ಕರೀಮ್‌ಗಂಜ್, ಕ್ಯಾಚಾರ್, ಹೊಜೈ, ಗೋಲಾಘಾಟ್, ದಿಮಾ - ಹಸಾವೊ ಮತ್ತು ಕರ್ಬಿ ಆಂಗ್ಲಾಂಗ್ ಜಿಲ್ಲೆಗಳು ಪ್ರವಾಹದ ಹಿಡಿತದಲ್ಲಿವೆ. ಈ ಒಂಬತ್ತು ಜಿಲ್ಲೆಗಳ 22 ಕಂದಾಯ ವ್ಯಾಪ್ತಿಯಲ್ಲಿರುವ 386 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಈ ಪೈಕಿ ಕ್ಯಾಚಾರ್ ಜಿಲ್ಲೆಯ 150 ಮತ್ತು ಕರೀಮ್‌ಗಂಜ್ ಜಿಲ್ಲೆಯ 100 ಗ್ರಾಮಗಳು ಹಾನಿಗೊಳಗಾಗಿವೆ ಎಂಬುದಾಗಿ ತಿಳಿದು ಬಂದಿದೆ. ಪ್ರವಾಹದಿಂದ ಸುಮಾರು 2 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ.
3,239 ಹೆಕ್ಟೇರ್ ಬೆಳೆ ಹಾನಿಯಾಗಿದೆ : ಒಂಬತ್ತು ಜಿಲ್ಲೆಗಳಲ್ಲಿ 3,238.8 ಹೆಕ್ಟೇರ್ ಕೃಷಿ ಭೂಮಿ ವಿನಾಶಕಾರಿ ಪ್ರವಾಹದಲ್ಲಿ ಹಾನಿಗೊಳಗಾಗಿದೆ. ಈ ಪೈಕಿ ಕ್ಯಾಚಾರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 1,523 ಹೆಕ್ಟೇರ್ ಕೃಷಿ ಭೂಮಿ ಪ್ರವಾಹದಿಂದ ಹಾನಿಗೀಡಾಗಿದೆ. ನಾಗಾಂವ್ ಜಿಲ್ಲೆಯಲ್ಲಿ 1,163 ಹೆಕ್ಟೇರ್, ಹೋಜೈ ಜಿಲ್ಲೆಯಲ್ಲಿ 458 ಹೆಕ್ಟೇರ್, ಗೋಲಘಾಟ್ ಜಿಲ್ಲೆಯಲ್ಲಿ 71 ಹೆಕ್ಟೇರ್ ಮತ್ತು ಹೈಲಕಂಡಿ ಜಿಲ್ಲೆಯಲ್ಲಿ 24 ಹೆಕ್ಟೇರ್ ಕೃಷಿ ಭೂಮಿ ಪ್ರವಾಹಕ್ಕೆ ತುತ್ತಾಗಿದೆ.
ಪರಿಹಾರ ಮತ್ತು ಆಶ್ರಯ ಶಿಬಿರಗಳು : ಪ್ರವಾಹ ಪೀಡಿತ ರಾಜ್ಯಗಳ ಒಂಬತ್ತು ಜಿಲ್ಲೆಗಳಲ್ಲಿ 110 ಆಶ್ರಯ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಕ್ಯಾಚಾರ್ ಜಿಲ್ಲೆಯಲ್ಲಿ ಅತಿ ಹೆಚ್ಚು 53, ಕರೀಮ್‌ಗಂಜ್ ಜಿಲ್ಲೆಯಲ್ಲಿ 23, ಹೈಲಕಂಡಿ ಜಿಲ್ಲೆ 19, ಹೊಜೈ ಜಿಲ್ಲೆ 9, ದಿಮಾ ಹಸಾವೊ ಜಿಲ್ಲೆ ನಾಲ್ಕು, ನಾಗಾಂವ್ ಜಿಲ್ಲೆ ಒಂದು ಮತ್ತು ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆ ಒಂದು ಆಶ್ರಯ ಶಿಬಿರವನ್ನು ತೆರೆಯಲಾಗಿದೆ.
ಪ್ರವಾಹಕ್ಕೆ ಇಲ್ಲಿಯವರೆಗೆ ಇಬ್ಬರು ಸಾವು: ರಾಜ್ಯಾದ್ಯಂತ ಭೀಕರ ಪ್ರವಾಹಕ್ಕೆ ಇದುವರೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ಅವರಲ್ಲಿ ಒಬ್ಬರು ಹೈಲಕಂಡಿ ಜಿಲ್ಲೆಯ ಲಾಲಾ ಮತ್ತು ಒಬ್ಬರು ಕರೀಂಗಂಜ್ ಜಿಲ್ಲೆಯ ರಾಮಕೃಷ್ಣ ನಗರದವರು ಎಂಬುದು ತಿಳಿದುಬಂದಿದೆ.
ರಕ್ಷಣಾ ಕಾರ್ಯಾಚರಣೆಗಳು : ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಎಸ್ಡಿಆರ್ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಸ್ಥಳೀಯ ಆಡಳಿತ ಮತ್ತು ನಾಗರಿಕ ರಕ್ಷಣೆ ಸೇರಿದಂತೆ ವಿವಿಧ ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಈಗಾಗಲೇ ಇನ್ನೂರಕ್ಕೂ ಹೆಚ್ಚು ಜನರನ್ನು ಬೋಟ್ ಮೂಲಕ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.
ಇದೇ ವೇಳೆ, ಪ್ರವಾಹ ಸಂತ್ರಸ್ತರಿಗೆ 582 ಕ್ವಿಂಟಾಲ್ ಅಕ್ಕಿ, 499 ಕ್ವಿಂಟಾಲ್ ಬೇಳೆಕಾಳು, 27 ಕ್ವಿಂಟಾಲ್ ಉಪ್ಪು ಮತ್ತು 3,140 ಲೀಟರ್ ಸಾಸಿವೆ ಎಣ್ಣೆ ವಿತರಿಸಲಾಗಿದೆ. ಅದೇ ರೀತಿ ಮಕ್ಕಳಿಗೂ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಇನ್ನೊಂದೆಡೆ ಜಾನುವಾರುಗಳಿಗೂ ಆಹಾರ ನೀಡಲಾಗುತ್ತಿದೆ.
ಇದನ್ನೂ ಓದಿ : ಪ.ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಮಳೆ ಅಬ್ಬರ; ಉತ್ತರ ಭಾರತದಲ್ಲಿ ಬಿಸಿಲ ಝಳ - Heavy Rainfall Affects West Bengal