ನಂದ್ಯಾಲ(ಆಂಧ್ರಪ್ರದೇಶ): ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ನವವಿವಾಹಿತರು ಸೇರಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂದ್ಯಾಲ ಜಿಲ್ಲೆಯಲ್ಲಿ ಇಂದು ನಡೆಯಿತು. ಅಲ್ಲಗಡ್ಡ ಮಂಡಲದ ನಲ್ಲಗಟ್ಲ ಎಂಬಲ್ಲಿ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕುಟುಂಬಸಮೇತ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ಕಾರು ರಸ್ತೆಯಿಂದ ಸ್ಕಿಡ್ ಆಗಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಮೃತರೆಲ್ಲರೂ ಸಿಖಂದರಾಬಾದ್ ಜಿಲ್ಲೆಯ ಪಶ್ಚಿಮ ವೆಂಕಟಾಪುರಂ ನಿವಾಸಿಗಳು ಎಂದು ತಿಳಿದು ಬಂದಿದೆ. ಸಾವಿಗೀಡಾದವರಲ್ಲಿ ಇಬ್ಬರು ಮಹಿಳೆಯರು ಹಾಗೂ ಮೂವರು ಪುರುಷರು ಸೇರಿದ್ದಾರೆ. ನವದಂಪತಿ ಬಾಲಕಿರಣ್ ಹಾಗೂ ಕಾವ್ಯಾ ಸಾವನ್ನಪ್ಪಿದ್ದಾರೆ. ಇವರು ಫೆಬ್ರುವರಿ 29ರಂದು ತೆನಾಲಿಯಲ್ಲಿ ಮದುವೆಯಾಗಿದ್ದರು. ಇದೇ 3ರಂದು ಶಾಮೀರ್ಪೇಟೆಯಲ್ಲಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಬಾಲಕಿರಣ್ ಅವರ ತಾಯಿ ಲಕ್ಷ್ಮಿ ಹಾಗೂ ತಂದೆ ರವಿಕುಮಾರ್ ಹಾಗೂ ಮತ್ತೊಬ್ಬ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನ ನಡೆಸಿ ತನಿಖೆ ಆರಂಭಿಸಿದ್ದಾರೆ.
ಹರಿಯಾಣದಲ್ಲೂ ಭೀಕರ ರಸ್ತೆ ಅಪಘಾತ: ದೇಶದಲ್ಲಿ ಇಂದು ವರದಿಯಾದ ಎರಡನೇ ರಸ್ತೆ ಅಪಘಾತ ಇದಾಗಿದೆ. ವಿವಾಹ ಸಮಾರಂಭದಿಂದ ಹಿಂದಿರುಗುತ್ತಿದ್ದ ಐವರು ಸಾವನ್ನಪ್ಪಿದ್ದಾರೆ. ರೇವಾರಿ ಜಿಲ್ಲೆಯಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರು, ಹರಿಯಾಣ ರೋಡ್ವೇಸ್ ಬಸ್ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ರೇವಾರಿ ಜಿಲ್ಲೆಯ ಮಹೇಂದ್ರಗಢ ರಸ್ತೆಯಲ್ಲಿರುವ ಸಿಹಾ ಗ್ರಾಮದ ಬಳಿ ಬುಧವಾರ ಅಪಘಾತ ಘಟಿಸಿದೆ.
ಸಾವನ್ನಪ್ಪಿದ ಐವರೂ ಚಾರ್ಖಿ-ದಾದ್ರಿ ಜಿಲ್ಲೆಯ ನಿವಾಸಿಗಳಾಗಿದ್ದು, ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ರೆವಾರಿ ಜಿಲ್ಲೆಯ ಧರುಹೇರಾ ಪಟ್ಟಣದ ಬಳಿಯ ತತಾರ್ಪುರ ಗ್ರಾಮಕ್ಕೆ ತೆರಳಿದ್ದರು. ಇಂದು ಬೆಳಗ್ಗೆ ಮದುವೆ ಸಮಾರಂಭ ಮುಗಿಸಿ ಎಲ್ಲರೂ ಬೊಲೆರೊ ಕಾರಿನಲ್ಲಿ ಮನೆಗೆ ವಾಪಸಾಗುತ್ತಿದ್ದರು. ಅಪಘಾತದ ಶಬ್ದ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಐವರೂ ಕೂಡಾ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಘಟನೆಯ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಮದುವೆ ಮೆರವಣಿಗೆಗೆ ತೆರಳುತ್ತಿದ್ದ ವೇಳೆ ಕಾಲುವೆಗೆ ಬಿದ್ದ ಕಾರು; ಮೂವರು ಸಾವು