ಫತೇಪುರ/ಅಲಿಗಢ: ಉತ್ತರ ಪ್ರದೇಶದ ಫತೇಪುರ ಮತ್ತು ಅಲಿಗಢದಲ್ಲಿ ಭಾನುವಾರ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಮಹಾ ಕುಂಭಮೇಳದ ಯಾತ್ರಿಗಳಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಫತೇಪುರ ಘಟನೆಯಲ್ಲಿ, ಕಾನ್ಪುರ-ಪ್ರಯಾಗರಾಜ್ ಹೆದ್ದಾರಿಯ ಬಹಾಲ್ಪುರ ತಿರುವಿನಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ವೇಗವಾಗಿ ಬಂದ ಎಸ್ಯುವಿ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಇತರ 9 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ರಾಜಸ್ಥಾನದ ಕರೌಲಿ ನಗರದಿಂದ ಮಹಾಕುಂಭ ಮೇಳಕ್ಕೆ ತೆರಳಿದ್ದ ಭಕ್ತರ ಕಾರು ಹೆದ್ದಾರಿಯ ಬದಿಯಲ್ಲಿ ನಿಂತಿತ್ತು. ಪ್ರಯಾಗರಾಜ್ ಕಡೆಗೆ ಹೋಗುತ್ತಿದ್ದ ಎಸ್ಯುವಿ ಹಿಂದಿನಿಂದ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಹೊಲಕ್ಕೆ ಪಲ್ಟಿಯಾಗಿ, ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ, ಕಾರು ಚಾಲಕ ಕೃಷ್ಣ ಕಾಂತ್ ಸೋನಿ (45) ಮತ್ತು ಅವರ ಅತ್ತಿಗೆ ರಾಧಾ ಸೋನಿ (58) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದೆ. ಎರಡೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ.
ಕಾರಿನಲ್ಲಿದ್ದ ಸುಮನ್ ದೇವಿ, ಗಿರಿರಾಜ್ ಸೋನಿ ಮತ್ತು ಅನ್ನಾ ಸೋನಿ, ಚಾಲಕ ಹರಿ ಸಿಂಗ್ ಮೀನಾ, ಹಾಗೂ ಎಸ್‌ಯುವಿನಲ್ಲಿ ಪ್ರಯಾಣಿಸುತ್ತಿದ್ದ ಅಜ್ಮೀರ್ ನಿವಾಸಿಗಳಾದ ಬಾಲಚಂದ್ರ ಜಾಖರ್, ನರೇಶ್ ಜಾಖರ್, ಗೀತಾ ದೇವಿ, ಜ್ಯೋತಿ ಜಾಖರ್ ಮತ್ತು ಕಾಮತಾ ಜಾಖರ್ ಕೂಡ ಗಾಯಗೊಂಡವರು.
ಕಾರಿಗೆ ಬಸ್ ಡಿಕ್ಕಿ: ಅಲಿಗಢ ಘಟನೆಯಲ್ಲಿ, ಕಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಾ ಕುಂಭಮೇಳದಿಂದ ಹಿಂದಿರುಗುತ್ತಿದ್ದ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಯಮುನಾ ಎಕ್ಸ್‌ಪ್ರೆಸ್‌ವೇಯ ಟಪ್ಪಲ್ ಇಂಟರ್‌ಚೇಂಜ್ ಬಳಿ ಘಟನೆ ಸಂಭವಿಸಿದೆ. ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಪದಮ್ (67), ಯುದ್ಧವೀರ್ (50) ಮತ್ತು ಸವಿತಾ (65) ಎಂದು ಗುರುತಿಸಲಾಗಿದೆ. ಬಿ.ಆರ್. ಶರ್ಮಾ (71) ಮತ್ತು ರಿತು ಗುಪ್ತಾ (48) ಎಂಬವರಿಗೆ ಗಾಯಾಗಳಾಗಿದೆ. ಇವರೆಲ್ಲರೂ ಜಮ್ಮು ನಿವಾಸಿಗಳು ಎಂದು ಪೊಲೀಸರು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘಾತ : ಒಂದರ ಮೇಲೊಂದು ಏರಿ ನಿಂತ ಕಾರುಗಳು