ಜಮ್ಮು: ಅಮರನಾಥ ಯಾತ್ರೆಗೆ ತೆರಳಲಿರುವ ಭಕ್ತರ ಮೊದಲ ತಂಡ ಜಮ್ಮುವಿಗೆ ಆಗಮಿಸಿದೆ. ಯಾತ್ರಾರ್ಥಿಗಳ ಮೊದಲ ತಂಡವು ಶುಕ್ರವಾರದಿಂದ ಯಾತ್ರೆ ಆರಂಭಿಸಲಿದೆ. ನೂರಾರು ಯಾತ್ರಿಗಳು ಈಗಾಗಲೇ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸಕ್ಕೆ ತಲುಪಿದ್ದು, ಇಲ್ಲಿಂದ ಅವರು ಉತ್ತರ ಕಾಶ್ಮೀರ ಬಾಲ್ಟಾಲ್ ಮತ್ತು ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಬೇಸ್ ಕ್ಯಾಂಪ್ಗಳಿಗೆ ಬೆಂಗಾವಲು ವಾಹನಗಳಲ್ಲಿ ತೆರಳಲಿದ್ದಾರೆ.
ಯಾತ್ರಿಗಳ ಮೊದಲ ಬ್ಯಾಚ್ ಶುಕ್ರವಾರ ಬೆಳಗ್ಗೆ 4 ಗಂಟೆಗೆ ಭಗವತಿ ನಗರ ಯಾತ್ರಿ ನಿವಾಸದಿಂದ ಹೊರಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಬೆಂಗಾವಲು ಪಡೆಯಲ್ಲಿ ಯಾತ್ರಿಗಳು ಕಣಿವೆಗೆ ತೆರಳಲಿದ್ದು, ಶನಿವಾರ ದೇವರ 'ದರ್ಶನ' ಪಡೆಯಲಿದ್ದಾರೆ. ಏತನ್ಮಧ್ಯೆ ಸುಮಾರು 300 ಕಿ.ಮೀ ಉದ್ದದ ಜಮ್ಮು - ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಭದ್ರತೆಗಾಗಿ ನೂರಾರು ಸಿಎಪಿಎಫ್ ಯೋಧರನ್ನು ನಿಯೋಜಿಸಲಾಗಿದೆ.
ಮತ್ತಷ್ಟು ಸಿಎಪಿಎಫ್ ತಂಡಗಳು 85 ಕಿ.ಮೀ ಉದ್ದದ ಶ್ರೀನಗರ-ಬಾಲ್ಟಾಲ್ ಬೇಸ್ ಕ್ಯಾಂಪ್ ರಸ್ತೆ ಮತ್ತು ಖಾಜಿಗುಂಡ್ - ಪಹಲ್ಗಾಮ್ ಬೇಸ್ ಕ್ಯಾಂಪ್ ರಸ್ತೆಯನ್ನು ಕಾವಲು ಕಾಯುತ್ತಿವೆ. ಅಧಿಕಾರಿಗಳು ಶ್ರೀನಗರ-ಬಾಲ್ಟಾಲ್ ಮಾರ್ಗದಲ್ಲಿ ಗಂದರ್ಬಾಲ್ ಜಿಲ್ಲೆಯ ಮಣಿಗಂನಲ್ಲಿ ಮತ್ತು ಖಾಜಿಗುಂಡ್-ಪಹಲ್ಗಾಮ್ ಮಾರ್ಗದ ಮೀರ್ ಬಜಾರ್ನಲ್ಲಿ ಯಾತ್ರಾ ಟ್ರಾನ್ಸಿಟ್ ಶಿಬಿರಗಳನ್ನು ಸ್ಥಾಪಿಸಿದ್ದಾರೆ.
ಈ ವರ್ಷದ ಅಮರನಾಥ ಯಾತ್ರೆಗೆ ಈವರೆಗೆ ಒಟ್ಟು 3.50 ಲಕ್ಷ ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲು ಗುಹಾ ದೇವಾಲಯಕ್ಕೆ ಹೋಗುವ ಎರಡು ಮಾರ್ಗಗಳಲ್ಲಿ 125 'ಲಂಗರ್' (ಸಮುದಾಯ ಅಡುಗೆಮನೆಗಳು) ಸ್ಥಾಪಿಸಲಾಗಿದೆ. ಈ ಲಂಗರ್ಗಳಲ್ಲಿ 7,000 ಕ್ಕೂ ಹೆಚ್ಚು ಸೇವಾದಾರರು ಯಾತ್ರಿಗಳಿಗೆ ಸೇವೆ ಸಲ್ಲಿಸಲಿದ್ದಾರೆ. ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳಲ್ಲಿ ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಸೇವೆ ಕೂಡ ಲಭ್ಯವಿದೆ.
ಈ ವರ್ಷ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸ್ಥಳೀಯ ಪೊಲೀಸರು, ಬಿಎಸ್ಎಫ್ ಮತ್ತು ಸಿಆರ್ಪಿಎಫ್ನಿಂದ 38 ಪರ್ವತಾರೋಹಿ ರಕ್ಷಣಾತಂಡಗಳನ್ನು ಕೂಡ ಯಾತ್ರೆಗೆ ನಿಯೋಜಿಸಲಾಗಿದೆ. ಸ್ಥಳೀಯ ಪೋರ್ಟರ್ಗಳು, ಪೋನಿವಾಲಾಗಳು ಮತ್ತು ಕಾರ್ಮಿಕರು ಪ್ರತಿವರ್ಷ ಅಮರನಾಥ ಯಾತ್ರಾರ್ಥಿಗಳಿಗೆ ಗುಹೆಗೆ ತಲುಪಲು ಸಹಾಯ ಮಾಡುತ್ತಾರೆ. ನುನ್ವಾನ್ (ಪಹಲ್ಗಾಮ್-ಗುಹೆ ದೇವಾಲಯ) ಸಾಂಪ್ರದಾಯಿಕ ಮಾರ್ಗವು 48 ಕಿ.ಮೀ ಉದ್ದವಿದ್ದರೆ, ಬಾಲ್ಟಾಲ್-ಗುಹೆ ದೇವಾಲಯ ಮಾರ್ಗವು ಕೇವಲ 14 ಕಿ.ಮೀ ಉದ್ದವಿದೆ.
ಸಾಂಪ್ರದಾಯಿಕ ನುನ್ವಾನ್ (ಪಹಲ್ಗಾಮ್-ಗುಹೆ ದೇವಾಲಯ) ಮಾರ್ಗವನ್ನು ಬಳಸುವ ಯಾತ್ರಿಗಳು ಗುಹೆ ದೇವಾಲಯವನ್ನು ತಲುಪಲು ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನು ಬಾಲ್ಟಾಲ್-ಗುಹೆ ದೇವಾಲಯ ಮಾರ್ಗವನ್ನು ಬಳಸುವವರು ದೇವರ 'ದರ್ಶನ' ಮಾಡಿ ಅದೇ ದಿನ ಮೂಲ ಶಿಬಿರಕ್ಕೆ ಮರಳುತ್ತಾರೆ.
ಇದನ್ನೂ ಓದಿ : ಅಮರನಾಥ ದೇವಾಲಯದಲ್ಲಿ 'ಪ್ರಥಮ ಪೂಜೆ' ಸಂಪನ್ನ: ಜೂನ್ 29ರಿಂದ ಯಾತ್ರೆ ಆರಂಭ - Amarnath Yatra