ನವದೆಹಲಿ: ಬಜೆಟ್ನಲ್ಲಿ ಘೋಷಿಸಲಾದ ಹೊಸ ಪಿಂಚಣಿ ಯೋಜನೆ 'ವಾತ್ಸಲ್ಯ'ಕ್ಕೆ ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನವದೆಹಲಿಯಲ್ಲಿ ಚಾಲನೆ ನೀಡಲಿದ್ದಾರೆ.
ಶಾಲಾ ಮಕ್ಕಳನ್ನು ಒಳಗೊಳ್ಳಲಿರುವ ಈ ಯೋಜನೆಯನ್ನು 2024ರ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಮಕ್ಕಳ ಬದಲಾಗಿ ಪೋಷಕರು ರಾಷ್ಟ್ರೀಯ ಪಿಂಚಣಿ (ಎನ್ಪಿಎಸ್) ಯೋಜನೆಯ ಮೂಲಕ ಅವರ ಭವಿಷ್ಯವನ್ನು ಸುಭದ್ರಗೊಳಿಸಬಹುದಾಗಿದೆ.
ಯೋಜನೆಯ ಉದ್ಘಾಟನೆಯ ದಿನವೇ 'ಎನ್ಪಿಎಸ್ ವಾತ್ಸಲ್ಯ ಯೋಜನೆ' ಸೇರಲು ಆನ್ಲೈನ್ ವೇದಿಕೆ ಒದಗಿಸಲಾಗಿದೆ. ಇದಕ್ಕಾಗಿ ವಾತ್ಸಲ್ಯ ಯೋಜನೆ ಬ್ರೋಚರ್ ಮತ್ತು ಪಿಆರ್‌ಎಎನ್ (ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ) ಕಾರ್ಡ್ ಅನ್ನು ಹೊಸ ಅಪ್ರಾಪ್ತ ಚಂದಾದಾರರಿಗೆ ವಿತರಿಸಲಾಗುತ್ತದೆ.
ಉದ್ಘಾಟನಾ ಕಾರ್ಯಕ್ರಮಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸೇರಬಹುದು. ಅಲ್ಲಿಯೂ ಕೂಡ ಪಿಆರ್‌ಎಎನ್ ಸದಸ್ಯತ್ವ ಪಡೆಯಬಹುದು.
ಎನ್ಪಿಎಸ್ ವಾತ್ಸಲ್ಯ ಯೋಜನೆಯ ಕುರಿತು..: ಎನ್ಪಿಎಸ್ ವಾತ್ಸಲ್ಯದ ಮೂಲಕ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ಪಿಂಚಣಿ ಖಾತೆಯಲ್ಲಿ ಹೂಡಿಕೆ ಮಾಡಬಹುದು. ದೀರ್ಘಕಾಲದ ಈ ಯೋಜನೆ ಆರ್ಥಿಕ ಭದ್ರತೆ ಹೊಂದಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ವಾತ್ಸಲ್ಯ ಯೋಜನೆಯಲ್ಲಿ ಪೋಷಕರು ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೂಡಿಕೆ ಮಾಡಬಹುದಾಗಿದೆ. ವಾರ್ಷಿಕವಾಗಿ ಕನಿಷ್ಠ 1 ಸಾವಿರ ರೂಪಾಯಿಯನ್ನೂ ಮಗುವಿನ ಹೆಸರಲ್ಲಿ ಹೂಡಿಕೆ ಮಾಡಬಹುದು. ಈ ಮೂಲಕ ಎಲ್ಲ ರೀತಿಯ ಆರ್ಥಿಕ ಹಿನ್ನೆಲೆ ಹೊಂದಿರುವ ಪೋಷಕರನ್ನು ಯೋಜನೆಯಲ್ಲಿ ಒಳಗೊಳ್ಳುವಂತೆ ಮಾಡಲಾಗುತ್ತದೆ. ಯೋಜನೆ ತೆರಿಗೆ ವಿನಾಯಿತಿ ಹೊಂದಿದೆ.
ಈ ಹೊಸ ಉಪಕ್ರಮವನ್ನು ಆರಂಭಿಕ ಹಂತದಲ್ಲೇ ಮಕ್ಕಳ ಭವಿಷ್ಯ ಸುಭದ್ರಗೊಳಿಸುವ ನಿಟ್ಟಿನಲ್ಲಿ ವಿನ್ಯಾಸ ಮಾಡಲಾಗಿದ್ದು, ಭಾರತದ ಪಿಂಚಣಿ ವ್ಯವಸ್ಥೆಯಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಲಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಡಿ (ಪಿಎಫ್ಆರ್ಡಿಎ) ಇದು ಕಾರ್ಯ ನಿರ್ವಹಿಸಲಿದೆ. (ಐಎಎನ್ಎಸ್)
ಇದನ್ನೂ ಓದಿ: ಮಕ್ಕಳ ಹೆಸರಿನಲ್ಲೂ ಆರಂಭಿಸಬಹುದು ಪಿಂಚಣಿ ಯೋಜನೆ: ಇಲ್ಲಿದೆ ವಾತ್ಸಲ್ಯ ಸ್ಕೀಂ ಮಾಹಿತಿ