ನವದೆಹಲಿ: ದೇಶದ ಯಾವುದೇ ನಿರ್ಧಾರವನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, 370ನೇ ವಿಧಿ ರದ್ದತಿಯನ್ನು ಟೀಕಿಸಿ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದ ಪ್ರಾಧ್ಯಾಪಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಗುರುವಾರ ರದ್ದುಗೊಳಿಸಿತು.
ಈ ಕುರಿತ ಬಾಂಬೆ ಹೈಕೋರ್ಟ್‌ನ ಆದೇಶವನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್, ಪ್ರೊಫೆಸರ್ ಜಾವೇದ್ ಅಹ್ಮದ್ ಹಜಾಮ್ ಎಂಬವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A (ಕೋಮು ಸೌಹಾರ್ದತೆಯನ್ನು ಉತ್ತೇಜಿಸುವುದು) ಅಡಿಯಲ್ಲಿ ದಾಖಲಿಸಿದ್ದ ಪ್ರಕರಣ ರದ್ದು ಮಾಡಿದೆ.
ವಾಟ್ಸ್ಆ್ಯಪ್ ಪೋಸ್ಟ್ನಲ್ಲೇನಿತ್ತು?: "ಆಗಸ್ಟ್ 5, ಕಪ್ಪು ದಿನ, ಜಮ್ಮು ಮತ್ತು ಕಾಶ್ಮೀರ" ಮತ್ತು "ಆಗಸ್ಟ್ 14? ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" ಎಂದು 370ನೇ ವಿಧಿ ರದ್ದುಪಡಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವಾಟ್ಸ್ಆ್ಯಪ್ ಸಂದೇಶಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಹಜಾಮ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಕೊಲ್ಲಾಪುರದ ಹತ್ಕನಂಗಲೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಗುರುವಾರ ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ''ಆಯಾ ಸ್ವಾತಂತ್ರ್ಯ ದಿನದಂದು ಇತರ ದೇಶಗಳ ನಾಗರಿಕರಿಗೆ ಶುಭ ಹಾರೈಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಭಾರತದ ಪ್ರಜೆಯು ಪಾಕಿಸ್ತಾನದ ನಾಗರಿಕರಿಗೆ ಅವರ ಸ್ವಾತಂತ್ರ್ಯ ದಿನವಾದ ಆಗಸ್ಟ್ 14 ರಂದು ಶುಭ ಹಾರೈಸಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ'' ಎಂದು ಹೇಳಿದೆ.
"ಭಾರತದ ಸಂವಿಧಾನವು ಆರ್ಟಿಕಲ್ 19(1)(ಎ) ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಇದರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕ ಆರ್ಟಿಕಲ್ 370ರ ರದ್ದತಿಯ ಕ್ರಮವನ್ನು ಟೀಕಿಸುವ ಹಕ್ಕು ಹೊಂದಿರುತ್ತಾನೆ. ಜೊತೆಗೆ, ರಾಜ್ಯದ ಯಾವುದೇ ನಿರ್ಧಾರದಿಂದ ತಾನು ಅತೃಪ್ತಿ ಹೊಂದಿದ್ದೇನೆ ಎಂದು ಹೇಳುವ ಹಕ್ಕು ಅವರಿಗಿದೆ'' ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಸ್ಪಷ್ಪಪಡಿಸಿತು.
ಇದನ್ನೂ ಓದಿ: ಮಹಿಳಾ ದಿನಕ್ಕೆ ಪ್ರಧಾನಿ ಮೋದಿ ಗಿಫ್ಟ್! ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ₹100 ಇಳಿಕೆ