ನವದೆಹಲಿ: ಇವಿಎಂ ಮತ್ತು ವಿವಿಪ್ಯಾಟ್ಗಳ ವಿವಿಧ ಬಿಡಿಭಾಗಗಳ ತಯಾರಕರು ಮತ್ತು ಪೂರೈಕೆದಾರರ ಹೆಸರು ಹಾಗೂ ಸಂಪರ್ಕ ವಿವರಗಳನ್ನು ಆರ್ಟಿಐ ಕಾಯ್ದೆಯಡಿ ಬಹಿರಂಗಪಡಿಸಲು ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಿರಾಕರಿಸಿವೆ. ವ್ಯವಹಾರದಲ್ಲಿ ವಿಶ್ವಾಸ ಉಳಿಸಿಕೊಳ್ಳುವ ಕಾರಣದಿಂದ ಈ ವಿವರಗಳನ್ನು ಬಹಿರಂಗಪಡಿಸಲಾಗದು ಎಂದು ಆರ್ಟಿಐ ಅರ್ಜಿಗೆ ಉತ್ತರಿಸಲಾಗಿದೆ.
ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂ) ಮತ್ತು ವಿವಿಪ್ಯಾಟ್ಗಳ ತಯಾರಿಕೆಯಲ್ಲಿ ಬಳಸಲಾಗುವ ವಿವಿಧ ಬಿಡಿಭಾಗಗಳ ತಯಾರಕರು ಮತ್ತು ಪೂರೈಕೆದಾರರ ವಿವರಗಳನ್ನು ಕೋರಿ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ನಾಯಕ್ ಎಂಬುವರು ಇಸಿಐಎಲ್ ಮತ್ತು ಬಿಇಎಲ್ಗೆ ಎರಡು ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿದ್ದರು.
ಬಿಡಿಭಾಗಗಳ ಖರೀದಿ ಆದೇಶ ಪ್ರತಿಗಳನ್ನು ನೀಡುವಂತೆ ನಾಯಕ್ ಕೋರಿದ್ದರು. "ಕೋರಲಾದ ಮಾಹಿತಿಯು ವ್ಯವಹಾರದಲ್ಲಿ ವಿಶ್ವಾಸದ ವಿಷಯವಾಗಿದೆ. ಹೀಗಾಗಿ ಆರ್ಟಿಐ ಕಾಯ್ದೆಯ ಸೆಕ್ಷನ್ 8 (1) (ಡಿ) ಅಡಿಯಲ್ಲಿ ವಿವರಗಳನ್ನು ಒದಗಿಸಲು ಸಾಧ್ಯವಿಲ್ಲ" ಎಂದು ಬಿಇಎಲ್ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ಆರ್ಟಿಐ ಅರ್ಜಿಗೆ ಇಸಿಐಎಲ್ ಕೂಡ ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದು, ಕೋರಲಾದ ವಿವರಗಳು ಇಸಿಐಎಲ್ ತಯಾರಿಸುತ್ತಿರುವ ಉತ್ಪನ್ನಕ್ಕೆ ಸಂಬಂಧಿಸಿವೆ ಮತ್ತು ಸ್ವರೂಪದಲ್ಲಿ ಮೂರನೇ ವ್ಯಕ್ತಿಗೆ ಸಂಬಂಧಿಸಿದ್ದಾಗಿವೆ ಎಂದು ಹೇಳಿದೆ. "ವಿವರಗಳನ್ನು ಬಹಿರಂಗಪಡಿಸುವುದು ಇಸಿಐಎಲ್ನ ಮಾರುಕಟ್ಟೆಯ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆರ್ಟಿಐ ಕಾಯ್ದೆ, 2005 ರ ಸೆಕ್ಷನ್ 8 (1) (ಡಿ) ಅಡಿಯಲ್ಲಿ ಈ ಮಾಹಿತಿಗಳನ್ನು ನೀಡಲಾಗುವುದಿಲ್ಲ" ಎಂದು ಅದು ಹೇಳಿದೆ.
ಖರೀದಿ ಆದೇಶದ ಪ್ರತಿಗಳನ್ನು ಕೋರಿದ ಅರ್ಜಿಗೆ ಪ್ರತಿಕ್ರಿಯಿಸಿದ ಇಸಿಐಎಲ್ನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ, ಮಾಹಿತಿಯು ದೊಡ್ಡ ಪ್ರಮಾಣದಲ್ಲಿದೆ. ಈ ಮಾಹಿತಿಯು ಬಹಿರಂಗವಾದಲ್ಲಿ ಇದು ಸಾರ್ವಜನಿಕ ಪ್ರಾಧಿಕಾರದ ಸಂಪನ್ಮೂಲಗಳ ದುರ್ಬಳಕೆಗೆ ಕಾರಣವಾಗಲಿದೆ ಎಂದು ಹೇಳಿದರು.
"ಇದಲ್ಲದೆ ಕೋರಲಾದ ಮಾಹಿತಿಯು ಇವಿಎಂ ಯಂತ್ರಗಳ ವಿನ್ಯಾಸದ ವಿವರಗಳನ್ನು ಒಳಗೊಂಡಿದೆ. ಹೀಗಾಗಿ ಇದು ಮುಂದೆ ಉತ್ಪಾದನೆಯಾಗುವ ಯಂತ್ರಗಳಿಗೆ ಅಪಾಯವನ್ನುಂಟುಮಾಡಬಹುದು. ಆದ್ದರಿಂದ, ಆರ್ಟಿಐ ಕಾಯ್ದೆ, 2005 ರ ಸೆಕ್ಷನ್ 7 (9) ಮತ್ತು ಸೆಕ್ಷನ್ 8 (1) (ಡಿ) ಅಡಿಯಲ್ಲಿ ಈ ಮಾಹಿತಿ ನೀಡದಿರಲು ವಿನಾಯಿತಿ ಕೋರಲಾಗಿದೆ" ಎಂದು ಇಸಿಐಎಲ್ ಹೇಳಿದೆ. ಆರ್ಟಿಐ ಕಾಯ್ದೆಯ ಸೆಕ್ಷನ್ 8 (1) (ಡಿ) ವಾಣಿಜ್ಯ ವಿಶ್ವಾಸ, ವ್ಯಾಪಾರ ರಹಸ್ಯಗಳು ಅಥವಾ ಬೌದ್ಧಿಕ ಆಸ್ತಿ ಸೇರಿದಂತೆ ಇಂಥ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡುತ್ತದೆ.
ಇದನ್ನೂ ಓದಿ : ನಿಮ್ಮ ಪಿತ್ರಾರ್ಜಿತ ಆಸ್ತಿಗೂ ಕಾಂಗ್ರೆಸ್ ತೆರಿಗೆ ಹಾಕುತ್ತದೆ: ಪ್ರಧಾನಿ ಮೋದಿ - PM Modi on Inheritance Tax