ಶಂಶಾಬಾದ್, ಹೈದರಾಬಾದ್: ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೌಲಾಲಂಪುರಕ್ಕೆ ತೆರಳುತ್ತಿದ್ದ ಪ್ರಯಾಣಿಕರಿಗೆ ಭಾರಿ ಸಂಕಷ್ಟ ಪರಿಸ್ಥಿತಿ ಎದುರಾಗಿತ್ತು. ತಾಂತ್ರಿಕ ದೋಷದಿಂದಾಗಿ ವಿಮಾನ ಗಂಟೆಗಟ್ಟಲೆ ಆಕಾಶದಲ್ಲೆ ಗಿರಿಕಿ ಹೊಡೆಯಬೇಕಾಯಿತು. ಹೀಗಾಗಿ ವಿಮಾನದಲ್ಲಿದ್ದವರು ಏನಾಗುತ್ತೋ ಎಂಬ ಆತಂಕದಲ್ಲಿ ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳುವಂತಾಗಿತ್ತು. ಗುರುವಾರ ಬೆಳಗ್ಗೆ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಮಲೇಷ್ಯಾ ಏರ್‌ಲೈನ್ಸ್‌ನ MH-99 ವಿಮಾನವು 130 ಪ್ರಯಾಣಿಕರೊಂದಿಗೆ ಬುಧವಾರ ಮಧ್ಯರಾತ್ರಿ 12.45 ಕ್ಕೆ ಕೌಲಾಲಂಪುರಕ್ಕೆ ಹೊರಟಿತ್ತು. ಟೇಕ್ ಆಫ್ ಆದ 15 ನಿಮಿಷಗಳ ನಂತರ ಪೈಲಟ್ ಶಂಶಾಬಾದ್ ಎಟಿಸಿ ಅಧಿಕಾರಿಗಳಿಗೆ ವಿಮಾನದ ಬಲ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಎಂದು ಮಾಹಿತಿ ನೀಡಿದರು. ಅವರ ಸಲಹೆ ಮೇರೆಗೆ ವಿಮಾನವನ್ನು ಶಂಶಾಬಾದ್ ವಿಮಾನ ನಿಲ್ದಾಣದ ಕಡೆಗೆ ತಿರುಗಿಸಲಾಯಿತು.
ವಿಮಾನದ ಟ್ಯಾಂಕ್ ನಲ್ಲಿ ಇಂಧನ ತುಂಬಿದ್ದರಿಂದ ತಕ್ಷಣ ಕೆಳಗಿಳಿದರೆ ಅವಘಡ ಸಂಭವಿಸಬಹುದು ಎಂಬ ಕಾರಣದಿಂದಾಗಿ ಎಟಿಸಿ ಅಧಿಕಾರಿಗಳು ತುರ್ತು ಭೂಸ್ಪರ್ಶಕ್ಕೆ ಅವಕಾಶ ನೀಡಲಿಲ್ಲ. ಇದರಿಂದಾಗಿ ಮೂರು ಗಂಟೆಗೂ ಹೆಚ್ಚು ಕಾಲ ವಿಮಾನ ಆಕಾಶದಲ್ಲೇ ಸುತ್ತು ಹಾಕಬೇಕಾಯಿತು. ಕೊನೆಗೆ 3.58ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆದ ಕಾರಣ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಲ್ಯಾಂಡಿಂಗ್ ಸಮಯದಲ್ಲಿ ಇಂಜಿನ್‌ನಿಂದ ಕಿಡಿಗಳು ಹಾರಿಹೋಗುವ ದೃಶ್ಯಗಳನ್ನು ಪ್ರಯಾಣಿಕರೊಬ್ಬರು ತಮ್ಮ ಸೆಲ್ ಫೋನ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಈ ಸುದ್ದಿ ವೈರಲ್ ಆಗಿದೆ. ಈ ಬೆಳವಣಿಗೆಗಳಿಂದ ಆತಂಕಗೊಂಡ ವಿಮಾನದಲ್ಲಿದ್ದ ಹಲವು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡಿಕೆ ಸಹ ಮಾಡಿದ್ದಾರೆ. ಉಳಿದವರನ್ನು ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಮತ್ತೊಂದು ವಿಮಾನದಲ್ಲಿ ಕೌಲಾಲಂಪುರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಬಿಹಾರದಲ್ಲಿ 'ನೀಟ್' ಕಿಂಗ್ಪಿನ್, ಪರೀಕ್ಷಾರ್ಥಿಗಳು ಸೇರಿ ಹಲವರ ಬಂಧನ: ₹32 ಲಕ್ಷಕ್ಕೆ ಡೀಲ್ - NEET Row