ಸಹರಾನ್ ಪುರ: ಪತಿಯ ಮನೆಯವರ ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದ ಕಾರಣದಿಂದ ತನ್ನ ಅತ್ತೆ-ಮಾವಂದಿರು ತನಗೆ ಎಚ್ಐವಿ ಸೋಂಕಿತ ಸಿರಿಂಜ್ ಚುಚ್ಚಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಮಹಿಳೆಯ ಪೋಷಕರು ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 15, 2023 ರಂದು ತನ್ನ ಮಗಳು ಉತ್ತರಾಖಂಡದ ಹರಿದ್ವಾರದ ಒಬ್ಬರನ್ನು ವಿವಾಹವಾಗಿದ್ದರು ಎಂದು ಮಹಿಳೆಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ರೋಜಂತ್ ತ್ಯಾಗಿ ಹೇಳಿದ್ದಾರೆ.
ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ ನಗದು, ಆಭರಣ ಮತ್ತು ಕಾರನ್ನು ನೀಡಿದ್ದರೂ, ಆಕೆಯ ಅತ್ತೆ ಮಾವಂದಿರು ಅಷ್ಟಕ್ಕೆ ಸಮಾಧಾನವಾಗದೆ ದೊಡ್ಡ ಕಾರು ಮತ್ತು ಹೆಚ್ಚುವರಿಯಾಗಿ 25 ಲಕ್ಷ ರೂ.ನೀಡಬೇಕೆಂದು ಬೇಡಿಕೆ ಇಟ್ಟಿದ್ದರು ಎಂದು ಮಹಿಳೆಯ ತಂದೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೇಡಿಕೆ ಈಡೇರದಿದ್ದಾಗ ವರನ ಕುಟುಂಬಸ್ಥರು ಮಹಿಳೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಆಕೆಯನ್ನು ಮನೆಯಿಂದ ಹೊರ ಹಾಕಿರುವುದಾಗಿ ಆರೋಪಿಸಲಾಗಿದೆ ಎಂದು ಎಸ್ಎಚ್ಒ ಹೇಳಿದರು. ಆಕೆಯ ಆರೋಗ್ಯ ಹದಗೆಟ್ಟ ನಂತರ, ಮಹಿಳೆಯ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಮಹಿಳೆಗೆ ಎಚ್ಐವಿ ಪಾಸಿಟಿವ್ ಬಂದಿರುವುದಾಗಿ ತಿಳಿದುಬಂದಿದೆ ಎಂದು ತ್ಯಾಗಿ ಮಾಹಿತಿ ನೀಡಿದರು.
ಆಕೆಗೆ ಗೊತ್ತಿಲ್ಲದ ಯಾವುದೋ ಔಷಧಿಗಳನ್ನು ನೀಡಲಾಗಿದೆ ಮತ್ತು ಎಚ್ಐವಿ ಸೋಂಕಿತ ಚುಚ್ಚುಮದ್ದನ್ನು ಚುಚ್ಚಲಾಗಿದೆ. ಇದರಿಂದ ಆಕೆಯ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ಸಂತ್ರಸ್ತೆಯ ಪತಿ ಮತ್ತು ಸೋದರ ಮಾವ ಸೇರಿದಂತೆ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತ್ಯಾಗಿ ತಿಳಿಸಿದರು.
ಫೆಬ್ರವರಿ 10 ರಂದು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ ಫೆಬ್ರವರಿ 11 ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಚುಚ್ಚುಮದ್ದನ್ನು ಯಾವಾಗ ನೀಡಲಾಯಿತು ಎಂಬ ಪ್ರಶ್ನೆಗೆ, ಸದ್ಯ ಇವು ಆರೋಪಗಳು ಮಾತ್ರವಾಗಿದ್ದು, ತನಿಖೆಯ ಸಮಯದಲ್ಲಿ ಸತ್ಯಗಳನ್ನು ಕಂಡುಹಿಡಿಯಲಾಗುವುದು ಎಂದು ಅವರು ಉತ್ತರಿಸಿದರು.
ಇದನ್ನೂ ಓದಿ: ದೇಶದ ಜವಾಬ್ದಾರಿಯುತ ಹಿಂದೂ ಸಮಾಜದಲ್ಲಿ ಒಗ್ಗಟ್ಟು ಅಗತ್ಯ; ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ - RSS PROGRAMME