ನವದೆಹಲಿ: ಕೇಂದ್ರ ತನಿಖಾ ದಳಗಳಲ್ಲಿ ಒಂದಾದ ಜಾರಿ ನಿರ್ದೇಶನಾಲಯ (ಇಡಿ) ಭ್ರಷ್ಟರನ್ನು ಮಟ್ಟಹಾಕುವ ಸಂಸ್ಥೆ. ಆದರೆ, ಇದೇ ಸಂಸ್ಥೆಯ ಅಧಿಕಾರಿಯೇ ಲಂಚ ಸ್ವೀಕರಿಸುವಾಗ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳಿಗೆ ಸಿಕ್ಕಿಬಿದ್ದ ಘಟನೆ ಗುರುವಾರ ನಡೆದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ವ್ಯಾಪಾರಿಯೊಬ್ಬರ ಪ್ರಕರಣದಲ್ಲಿ ಆರೋಪಿಗಳಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಇಡಿ ಸಹಾಯಕ ನಿರ್ದೇಶಕನನ್ನು ಸಿಬಿಐ ರೆಡ್ಹ್ಯಾಂಡಾಗಿ ಹಿಡಿದು ಬಂಧಿಸಿದೆ.
ಬಂಧಿತ ಅಧಿಕಾರಿಯನ್ನು ಸಂದೀಪ್ ಸಿಂಗ್ ಯಾದವ್ ಎಂದು ಗುರುತಿಸಲಾಗಿದೆ. ಈತ ದೆಹಲಿ ಇಡಿ ಕಚೇರಿಯ ಸಹಾಯಕ ನಿರ್ದೇಶಕ. ಆಭರಣ ವ್ಯಾಪಾರಿಯ ಪುತ್ರನ ಮೇಲೆ ಇದ್ದ ಪ್ರಕರಣದಲ್ಲಿ ಬಿಗ್ ರಿಲೀಫ್ ನೀಡುವುದಾಗಿ ಹೇಳಿ, ವ್ಯಾಪಾರಿಗೆ ಲಂಚದ ಬೇಡಿಕೆ ಇಟ್ಟಿದ್ದರು. ಅದನ್ನು ಪಡೆಯುತ್ತಿದ್ದಾಗ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ.
ಪ್ರಕರಣದಲ್ಲಿ ಇಡಿ ಅಧಿಕಾರಿ ಸಂದೀಪ್ ಸಿಂಗ್ ಯಾದವ್ ಲಂಚದ ಬೇಡಿಕೆ ಇಟ್ಟ ಬಗ್ಗೆ ದೂರು ಬಂದಿತ್ತು. ಅಧಿಕಾರಿಯನ್ನು ರೆಡ್ಹ್ಯಾಂಡಾಗಿ ಹಿಡಿಯಲು ಬಲೆ ಬೀಸಲಾಗಿತ್ತು. ಅದರಂತೆ ಗುರುವಾರ ಆರೋಪಿಗಳಿಂದ 20 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ದಾಳಿ ಮಾಡಿ ಅಧಿಕಾರಿಯನ್ನು ಬಂಧಿಸಲಾಗಿದೆ. ಭ್ರಷ್ಟ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
2023ರ ಆಗಸ್ಟ್ನಲ್ಲಿ ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಉದ್ಯಮಿ ಅಮನ್ ಧಾಲ್ ಅವರಿಗೆ ಪ್ರಕರಣದಲ್ಲಿ ರಿಲೀಫ್ ನೀಡಲು 5 ಕೋಟಿ ರೂಪಾಯಿ ಲಂಚ ಸ್ವೀಕರಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಮತ್ತು ಇತರ ಆರು ಅಧಿಕಾರಿಗಳನ್ನು ಸಿಬಿಐ ಬಂಧಿಸಿತ್ತು.
ಇದನ್ನೂ ಓದಿ: ಹೀರಾ ಗ್ರೂಪ್ ಮುಖ್ಯಸ್ಥೆ ನೌಹೀರಾ ಶೇಖ್ ಬಂಧನ ಪ್ರಕರಣ: ಜಪ್ತಿಯಾದ ದಾಖಲೆಗಳ ಬಗ್ಗೆ ಇಡಿ ಮಾಹಿತಿ - ED