ನವದೆಹಲಿ: 2024-25ರ ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ರಕ್ಷಣಾ ವಲಯಕ್ಕೆ ಹಚ್ಚಿನ ಅನುದಾನ ಕಲ್ಪಿಸಿದೆ. ಹಿಂದಿನ ವರ್ಷ 5.94 ಲಕ್ಷ ಕೋಟಿ ರೂ.ಗಳಷ್ಟು ಒದಗಿಸಲಾಗಿತ್ತು. ಈ ಬಾರಿ ರಕ್ಷಣಾ ವಲಯದ ಬಜೆಟ್‌ಅನ್ನು 6.21 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದು, ಶೇ.4.72ರಷ್ಟು ಅನುದಾನ ಹೆಚ್ಚುವರಿ ನೀಡಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಸತ್ತಿನಲ್ಲಿ ಮಂಡಿಸಿದ ಒಟ್ಟು ಬಜೆಟ್‌ನಲ್ಲಿ ರಕ್ಷಣಾ ಸಚಿವಾಲಯಕ್ಕೆ ಶೇ.13ರಷ್ಟು ಬಜೆಟ್ ಹಂಚಿಕೆಯಾಗಿದೆ. ರಕ್ಷಣಾ ಸಚಿವಾಲಯದ ಪ್ರಕಾರ, ಹೆಚ್ಚಿನ ಬಜೆಟ್ ಹಂಚಿಕೆಯು ಸಶಸ್ತ್ರ ಪಡೆಗಳಿಗೆ ಅತ್ಯಾಧುನಿಕ, ತಂತ್ರಜ್ಞಾನ ಆಧಾರಿತ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ಹಡಗುಗಳು, ಮಾನವರಹಿತ ವೈಮಾನಿಕ ವಾಹನಗಳು, ಡ್ರೋನ್‌ಗಳು ಮತ್ತು ವಿಶೇಷ ವಾಹನಗಳೊಂದಿಗೆ ಸಜ್ಜುಗೊಳಿಸಲು ಅನುಕೂಲವಾಗುತ್ತದೆ.
ಸುಖೋಯ್-30 ವಿಮಾನಗಳ ಯೋಜಿತ ಆಧುನೀಕರಣದ ಜೊತೆಗೆ ವಿಮಾನದ ಹೆಚ್ಚುವರಿ ಸಂಗ್ರಹಣೆ, ಮಿಗ್ 29 ವಿಮಾನದ ಸುಧಾರಿತ ಎಂಜಿನ್‌ಗಳು, ಸಾರಿಗೆ ವಿಮಾನ ಸಿ-295 ಮತ್ತು ಕ್ಷಿಪಣಿ ವ್ಯವಸ್ಥೆಗಳಿಗೆ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗಿದೆ. ಇದಲ್ಲದೇ, ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಮತ್ತಷ್ಟು ವೇಗ, ದೇಶೀಯ ಉತ್ಪಾದನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿಯಾಗಿ ಅನುದಾನ ಕಲ್ಪಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಭಾರತೀಯ ನೌಕಾಪಡೆಯ ಯೋಜನೆಗಳಾದ ಡೆಕ್-ಆಧಾರಿತ ಯುದ್ಧ ವಿಮಾನಗಳು, ಜಲಾಂತರ್ಗಾಮಿ ನೌಕೆಗಳು, ಮುಂದಿನ ಪೀಳಿಗೆಯ ಸಮೀಕ್ಷೆ ಹಡಗುಗಳು ಇತ್ಯಾದಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಈ ಅನುದಾನ ಹಂಚಿಕೆಯ ಮೂಲಕ ಸಾಕಾರಗೊಳ್ಳಲಿದೆ. ಅನುದಾನದ ಹಂಚಿಕೆಯ ಹೆಚ್ಚಿನ ಭಾಗವನ್ನು ದೇಶೀಯವಾಗಿ ತಯಾರಿಸಿದ ಮುಂದಿನ ಪೀಳಿಗೆಯ ಆಯುಧ ವ್ಯವಸ್ಥೆಗೆ ಬಳಸಿಕೊಳ್ಳಲಾಗುತ್ತದೆ. ಇದು ಉದ್ಯೋಗ ಸೃಷ್ಟಿ, ಬಂಡವಾಳ ಮತ್ತು ದೇಶೀಯ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಎಂದು ಸಚಿವಾಲಯ ಹೇಳಿದೆ.
ಈಗ 2024-25ನೇ ಸಾಲಿನ ರಕ್ಷಣೆ ವಲಯಕ್ಕೆ ಒದಗಿಸಿದ ಬಜೆಟ್‌ಅನ್ನು 2022-23ನೇ ಸಾಲಿಗೆ ಹೋಲಿಸಿದರೆ, ಸರಿಸುಮಾರು ಒಂದು ಲಕ್ಷ ಕೋಟಿ ರೂ.ಗಳಷ್ಟು (ಶೇ.18.35ರಷ್ಟು) ಹೆಚ್ಚಾಗಿದೆ ಮತ್ತು 2023-24ನೇ ಸಾಲಿನ ಹಂಚಿಕೆಗಿಂತ ಶೇ.4.72ರಷ್ಟು ಹೆಚ್ಚಳವಾಗಿದೆ. ಒಟ್ಟು ಅನುದಾನ ಹಂಚಿಕೆಯಲ್ಲಿ ಶೇ.27.67ರಷ್ಟು ಪ್ರಮುಖ ಪಾಲು ಬಂಡವಾಳ, ಶೇ.14.82ರಷ್ಟು ಜೀವನಾಂಶ ಮತ್ತು ಕಾರ್ಯಾಚರಣೆಯ ಸನ್ನದ್ಧತೆಯ ಮೇಲಿನ ಆದಾಯ ವೆಚ್ಚ, ಶೇ.30.68ರಷ್ಟು ವೇತನ ಮತ್ತು ಭತ್ಯೆ, ಶೇ.22.72ರಷ್ಟು ಪಿಂಚಣಿ ಮತ್ತು ಶೇ.4.11ರಷ್ಟು ನಾಗರಿಕ ಸಂಸ್ಥೆಗಳಿಗೆ ಹೋಗುತ್ತದೆ ಎಂದು ಸಚಿವಾಲಯ ವಿವರಿಸಿದೆ.
ಇದನ್ನೂ ಓದಿ: ಪರಿಷ್ಕೃತ ಮತ್ತು ಬಜೆಟ್ ಅಂದಾಜುಗಳ ಬಗ್ಗೆ ಮಧ್ಯಂತರ ಬಜೆಟ್ 2024 ಏನು ಹೇಳುತ್ತದೆ?