ಭುವನೇಶ್ವರ್ (ಒಡಿಶಾ): ಡಾನಾ ಚಂಡಮಾರುತದ ಪರಿಣಾಮ ಬುಧವಾರ ಸಂಜೆಯಿಂದ ಒಡಿಶಾದ 11 ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದೆ. ತೀವ್ರ ಚಂಡಮಾರುತವು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಲಿದ್ದು, ಕೇಂದ್ರಪರ ಜಿಲ್ಲೆಯ ಭೈರತ್ಕನಿಕ ಮತ್ತು ಭದ್ರಕ್ ಜಿಲ್ಲೆಯ ಧಮ್ರಾದಲ್ಲಿ ಭಾರೀ ಮಳೆಯಾಗಲಿದೆ.
ಡಾನಾ ಚಂಡಮಾರುತವೂ ಗಂಟೆಗೆ 15 ಕಿ.ಮೀ ವೇಗದಲ್ಲಿ ಬಂಗಾಳಕೊಲ್ಲಿಯ ಪೂರ್ವ ಕೇಂದ್ರ ಮತ್ತು ಪಶ್ಚಿಮ ಕೇಂದ್ರದಿಂದ ಉತ್ತರ ವಾಯುವ್ಯದ ಕಡೆಗೆ ಬೀಸುತ್ತಿದೆ. ಪಶ್ಚಿಮ ಬಂಗಾಳದ ಕರಾವಳಿ ಮತ್ತು ಒಡಿಶಾದ ಉತ್ತರ ಭಾಗದಲ್ಲಿ ಗಾಳಿಯು ಗಂಟೆಗೆ 100 ರಿಂದ 110 ಕಿ,ಮೀ ವೇಗವಾಗಿ ಬೀಸುತ್ತಿದೆ.
ಈ ಕುರಿತು ಮಾತನಾಡಿರುವ ಭುವನೇಶ್ವರ್ದ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕರಾದ ಡಾ ಮನೊರಮ ಮೊಹಂತಿ, ಕೆಲವು ಪ್ರದೇಶದಲ್ಲಿ ತೀವ್ರ ಮಳೆಯಾಗುತ್ತಿದೆ. ಭದ್ರಕ್ ಜಿಲ್ಲೆಯ ಚಂದ್ಬಲಿಯಲ್ಲಿ ದಾಖಲೆಯ 46.2ಎಂ.ಎಂ ಮಳೆಯಾಗಿದೆ. ಪರರದೀಪ್ನಲ್ಲಿ 62.9 ಎಂ.ಎಂ, ಜಗತ್ರಿಂಗ್ಪುರ್ನಲ್ಲಿ 27 ಎಂ.ಎಂ, ಕೇಂದ್ರಪರದ ರಾಜ್ಕನಿಕದಲ್ಲಿ 27 ಎಂಎಂ, ಬಾಲಸೊರ್ನ ನೀಲಗಿರಿಯಲ್ಲಿ 27 ಎಂ.ಎಂ, ಮಯುರ್ಬಂಜ್ನ ಬೆಟ್ನೊಟಿಯಲ್ಲಿ 19 ಎಂಎಂ ಮಳೆಯಾಗುತ್ತಿದೆ.
ಕೇಂದ್ರಪದ ಮತ್ತು ಭದ್ರಕ್ನಲ್ಲಿ ಗಾಳಿಯ ವೇಗ ಅತಿ ತೀವ್ರವಾಗಿದ್ದು, ಗಂಟೆಗೆ 100 ರಿಂದ 110 ಕಿ,ಮೀ ಇರಲಿದೆ. ಮಯೂರ್ಬಂಜ್ ಮತ್ತು ಜಗತ್ಸಿಂಗ್ಪುರ್, ಜಾಜ್ಪುರ್ ಮತ್ತು ಕಟಕ್ನಲ್ಲಿ ಗಾಳಿಯ ವೇಗ ಗಂಟೆಗೆ 67-70 ಕಿ.ಮೀ ಇರಲಿದೆ.
ಸೇವೆಗಳು ಬಂದ್: ಒಡಿಶಾದಲ್ಲಿ ಚಂಡಮಾರುತ ಅಬ್ಬರ ಹಿನ್ನೆಲೆ ಕೋನಾರ್ಕ್ ಸೂರ್ಯ ದೇಗುಲ, ಪುರಿ ಜಗನ್ನಾಥ್ ದೇಗುಲ, ಸಿಮಿಲಿಪಲ್ ಹುಲಿ ಸಂರಕ್ಷಣಾಧಾಮ, ನಂದಂಕನನ್ ಪ್ರಾಣಿ ಸಂಗ್ರಹಾಲಯ, ಭಿತರ್ಕನಿಕ ಪಕ್ಷಿಧಾಮವನ್ನು ಅ. 24 ಮತ್ತು 25ರಂದು ಎರಡು ದಿನಗಳ ಕಾಲ ಬಂದ್ ಮಾಡಲಾಗಿದೆ. ಪೂರ್ವ ಕರಾವಳಿಯ 197 ರೈಲುಗಳ ಸೇವೆಯನ್ನು ಕೂಡ ರದ್ದು ಮಾಡಲಾಗಿದೆ. ಜೊತೆಗೆ ಭುವನೇಶ್ವರ್ನ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಗುರುವಾರ ಸಂಜೆ 5ರಿಂದ ಶುಕ್ರವಾರ ಬೆಳಗ್ಗೆ 9ರ ವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಶುಕ್ರವಾರದ ಎಲ್ಲಾ ವಿಮಾನಗಳನ್ನು ರದ್ದು ಮಾಡಲಾಗಿದೆ.
ಸುರಕ್ಷತೆ ಕರೆ ನೀಡಿದ ಸಿಎಂ ಮೋಹನ್ ಮಂಜಿ: ದಾನಾ ಚಂಡಮಾರುತ ಹಿನ್ನೆಲೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರನ್ ಮಂಜಿ, ಬುಧವಾರ ಸಂಜೆ ಸರ್ಕಾರದ ಎಲ್ಲಾ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಜನರಿಗೆ ಸುರಕ್ಷತೆ ನಿಮ್ಮ ಕೈಯಲ್ಲೇ ಇದೆ ಎಂಬ ಸಂದೇಶವನ್ನು ನೀಡಿದ್ದಾರೆ. ಚಂಡಮಾರುತದ ಎದುರಿಸಲು ಸಜ್ಜಾಗುವಂತೆ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಆರೋಗ್ಯ ಇಲಾಖೆಯ ಸಿಡಿಎಂಒ ಸಿಬ್ಬಂದಿಗಳಿಗೆ ರಜೆ ರದ್ದು ಮಾಡಿ, ಸೇವೆಗೆ ಮುಂದಾಗುವಂತೆ ತಿಳಿಸಿದ್ದಾರೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳದ ವಿವಿಧ ಪ್ರದೇಶದಲ್ಲಿ ಎನ್ಐಆರ್ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಭೂ ಕುಸಿತಕ್ಕೆ ಮುನ್ನವೇ ಜನರ ಸುರಕ್ಷಿತ ಸ್ಥಳಾಂತರ ನಡೆಸಲಾಗಿದೆ. ಒಡಿಶಾದ 20 ಕಡೆ ಮತ್ತು ಪಶ್ಚಿಮ ಬಂಗಾಳದ 13 ಕಡೆ ಮತ್ತು ಹೆಚ್ಚುವರಿಯಾಗಿ 4 ತಂಡಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ಲಕ್ಷಾಂತರ ಮಂದಿ ಸ್ಥಳಾಂತರ ಕಾರ್ಯ ನಡೆಸಿದ್ದು, ಶೀಘ್ರದಲ್ಲೇ ಉಳಿದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಎನ್ಡಿಆರ್ಎಫ್ನ ಡಿಐಜಿ ಮೊಹೆಸೆನ್ ಶಹಿದಿ ತಿಳಿಸಿದ್ದಾರೆ.
ಜಾರ್ಖಂಡನ್ನಲ್ಲಿ ಎನ್ಡಿಆರ್ಎಫ್: ಡಾನಾ ಚಂಡಮಾರುತದ ಪರಿಣಾಮ ಜಾರ್ಖಂಡ್ನ ಪಶ್ಚಿಮ ಸಿಂಗ್ಬುಮ್, ಸೆರೈಕೆಲಕರ್ಸ್ವನ್ ಮತ್ತು ಪೂರ್ವ ಸಿಂಗ್ಭೂಮ್ ಜಿಲ್ಲೆಗಳಲ್ಲಿ ಇರಲಿದೆ. ಈ ಹಿನ್ನೆಲೆ ಇಲ್ಲೂ ಕೂಡ ಆರು ಎನ್ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿದ್ದು, ಎರಡು ಪಡೆಗಳು ರಾಂಚಿಯಲ್ಲಿರಲಿವೆ.
ಇದನ್ನೂ ಓದಿ: ನಾಯಿ ಜೊತೆಗಿನ ಆಟ ತಂತು ಪ್ರಾಣಕ್ಕೆ ಕುತ್ತು; ಆಯತಪ್ಪಿ ಹೋಟೆಲ್ ಮೂರನೇ ಮಹಡಿಯಿಂದ ಬಿದ್ದು ಯುವಕ ಸಾವು