ಹೈದರಾಬಾದ್: ಡಿಜಿಟಲ್ ಸಾಕ್ಷರತೆಯಲ್ಲಿ ವ್ಯಕ್ತಿಗಳ ದುರ್ಬಲತೆ ಮತ್ತು ಅಗತ್ಯತೆಗಳನ್ನು ಬಂಡವಾಳವಾಗಿಸಿಕೊಂಡ ಸೈಬರ್ ಅಪರಾಧಿಗಳು ಅವರನ್ನು ಆರ್ಥಿಕವಾಗಿ ನಷ್ಟಕ್ಕೆ ಗುರಿಯಾಗಿಸುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನದಲ್ಲಿ ಈ ಪ್ರಕರಣದಲ್ಲಿ ಭಾರೀ ಏರಿಕೆ ಕಂಡಿದ್ದು, ಸೈಬರ್ ಕ್ರೈಂ ಪೊಲೀಸರು ಬಿಡುಗಡೆ ಮಾಡಿದ ವರದಿ ಆಘಾತ ಮೂಡಿಸಿದೆ. ಕಾರಣ ಕಳೆದ 8 ತಿಂಗಳಿನಿಂದ ಈ ಸಂಬಂಧ 2,000 ಪ್ರಕರಣ ದಾಖಲಾಗಿದ್ದು, 205 ಕೋಟಿ ರೂ. ಸೈಬರ್ ಅಪರಾಧ ನಡೆದಿದೆ.
ಅಮಾಯಕರನ್ನು ಹೇಗೆ ಮೋಸಗೊಳಿಸಲಾಗುತ್ತಿದೆ ಎಂಬುದಕ್ಕೆ ತಾಜಾ ಉದಾಹರಣೆ ಈ ಸಿಕಂದರಾಬಾದ್ ಪ್ರಕರಣವಾಗಿದೆ. ಪಾರ್ಟ್ ಟೈಂ ಉದ್ಯೋಗವಕಾಶದ ಆಸೆಗೆ ಬಲಿಯಾದ ಯುವಕ ಮೊಬೈಲ್ಗೆ ಬಂದ ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಿದ್ದ. ತನ್ನ ಗುರಿ ಮುಗಿಸಿ ಕಡಿಮೆ ಅವಧಿಯಲ್ಲಿ 10 ಸಾವಿರ ಗಳಿಸಿದ. ದುಪ್ಪಟ್ಟು ಆದಾಯದ ಆಸೆಗೆ ಬಲಿಯಾಗಿ ಕಡೆಗೆ 20 ಲಕ್ಷ ನಷ್ಟ ಅನುಭವಿಸಿದ್ದಾನೆ.
ಇದೇ ರೀತಿಯ ಮತ್ತೊಂದು ವಂಚನೆ ಪ್ರಕರಣ ಬಂಜಾರ ಹಿಲ್ಸ್ನಲ್ಲಿ ನಡೆದಿದೆ. ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ನಿಮ್ಮ ಮಗನನ್ನು ಕಿಡ್ನಾಪ್ ಮಾಡಿದ್ದೇವೆ. ₹ 50 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದನ್ನು ನಂಬಿ ಆತಂಕಕ್ಕೆ ಒಳಗಾದ ವ್ಯಕ್ತಿ ಮಗನ ರಕ್ಷಣೆಗಾಗಿ ₹ 50 ಲಕ್ಷ ನೀಡಿದ್ದಾರೆ.
ದುರ್ಬಲ ಗುಂಪುಗಳೇ ಇವರ ಟಾರ್ಗೆಟ್: ಸೈಬರ್ ಅಪರಾಧಿಗಳು ಹೆಚ್ಚಾಗಿ ಹಿರಿಯರು ಮತ್ತು ಖಾಲಿ ಸಮಯದಲ್ಲಿ ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ನಿರತರಾಗಿರುವರನ್ನೇ ಗುರಿಯಾಗಿಸುತ್ತಾರೆ. ಕೆಲವು ಬಾರಿ ನಿವೃತ್ತ ನೌಕರರನ್ನು ಬಲೆಗೆ ಕೆಡವುತ್ತಾರೆ. ವಂಚಕರು ಇದಕ್ಕಾಗಿ ಮಾರ್ಫಿಂಗ್ ಟೆಕ್ನಾಲಾಜಿ ಬಳಕೆ ಮಾಡಿಕೊಂಡು ತಮ್ಮದೇ ವಿಡಿಯೋ, ಫೋಟೋವನ್ನು ಸೃಷ್ಟಿಸುತ್ತಿದ್ದು, ಕಟುಂಬಸ್ಥರನ್ನು ಬೆದರಿಸುವ ಯತ್ನ ಮಾಡುತ್ತಿದ್ದಾರೆ.
ಜೊತೆಗೆ ವಂಚಕರು, ಸಿಬಿಐ, ಕಸ್ಟಮ್ಸ್, ಎನ್ಐಎ ಮತ್ತು ಇಡಿ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಅಕ್ರಮ ಡ್ರಗ್ಸ್, ಶಸ್ತ್ರಾಸ್ತ್ರ ಸಾಗಣೆಯಾಗುತ್ತಿದೆ ಎಂದು ಬೆದರಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಸೈಬರ್ ಅಪರಾಧದ ಸಂಖ್ಯೆ: ಹೆಚ್ಚುತ್ತಿರುವ ಸೈಬರ್ ಅಪರಾಧದ ಸಂಖ್ಯೆ ಎಚ್ಚರಿಕೆಯ ಗಂಟೆಯಾಗಿದೆ. ಇದೀಗ ಪತ್ತೆಯಾಗಿರುವ ಅಪರಾಧಿಗಳ ಖಾತೆಯಿಂದ 100 ಕೋಟಿ ರೂ.ವನ್ನು ತಡೆ ಹಿಡಿಯಾಲಾಗಿದ್ದು, 32 ಕೋಟಿಯನ್ನು ಸಂತ್ರಸ್ತರ ಖಾತೆಗೆ ವರ್ಗಾಯಿಸುವಂತೆ ಸೂಚಿಸಲಾಗಿದೆ ಎಂದು ಸೈಬರ್ಕ್ರೈಂ ಡಿಸಿಪಿ ಕವಿತಾ ಧಾರಾ ತಿಳಿಸಿದ್ದಾರೆ. ಸೈಬರ್ ಅಪರಾಧ ಸಂಬಂದ ಪೊಲೀಸರು ಪ್ರತಿನಿತ್ಯ 10 ರಿಂದ 15 ದೂರುಗಳನ್ನು ಸ್ವೀಕರಿಸುತ್ತಿದ್ದು, ಇದರಲ್ಲಿ ಹೆಚ್ಚಿನವು ನಕಲಿ ಹೂಡಿಕೆ ಯೋಜನೆ, ಷೇರು ಮಾರುಕಟ್ಟೆ ವಂಚನೆ, ಫೆಡ್ಎಕ್ಸ್ ಪಾರ್ಸೆಲ್, ಪಾರ್ಟ್ ಟೈಂ ಕೆಲಸದ ಅವಕಾಶಗಳಾಗಿವೆ. ಇಂತಹ ಅಪರಾಧಗಳಿಂದಾಗಿ ನಗರದ ಜನರಲ್ಲಿ ತಿಂಗಳಿಗೆ 30-35 ಕೋಟಿ ನಷ್ಟ ಉಂಟಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಾಗೃತಿ ಮತ್ತು ವರದಿ: ಪ್ರಕರಣ ಸಂಬಂಧ ಮಾತನಾಡಿರುವ ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್, ಸೈಬರ್ ಅಪರಾಧಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಜನರು ರಿಟರ್ನ್ಸ್ಗಳೊಂದಿಗೆ ಹೂಡಿಕೆ ಆಸೆ ಮತ್ತು ಅನಗತ್ಯ ಲಿಂಕ್ಗಳನ್ನು ಕ್ಲಿಕ್ ಮಾಡುವ ಆಮಿಷಗಳಿಗೆ ಬಲಿಯಾಗಬಾರದು. ಜಾಗೃತಿ ಮತ್ತು ಈ ಸಂಬಂಧ ವರದಿ ಮಾಡುವುದರಿಂದ ಈ ರೀತಿಯ ಪ್ರಕರಣವನ್ನು ಹತ್ತಿಕ್ಕಬಹುದಾಗಿದೆ. ಯಾವುದಾದರೂ ಬೆದರಿಕೆ ಕರೆ ಅಥವಾ ಆರ್ಥಿಕ ನಷ್ಟದ ಅನುಭವ ಆಗುತ್ತಿದ್ದರೆ, ತಕ್ಷಣಕ್ಕೆ ಸೈಬರ್ ಪೊಲೀಸರು ದೂರು ನೀಡುವುದು ಅವಶ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.
ದುರ್ಬಲರ ಮೇಲೆ ಸೈಬರ್ ಅಪರಾಧಗಳು ನಡೆಯುತ್ತಿದ್ದು, ಈ ಸಂಬಂಧ ಜಾಗೃತಿ ಮೂಡಿಸುವುದು ಮತ್ತು ಇಂತಹ ಪ್ರಕರಣಗಳು ಆದಾಗ ಈಕುರಿತು ಪೊಲೀಸರಿಗೆ ಮಾಹಿತಿ ನೀಡುವುದರಿಂದ ಬೆಳೆಯುತ್ತಿರುವ ಈ ಸೈಬರ್ ಅಪರಾಧ ಹಾವಳಿ ಹತ್ತಿಕ್ಕಬಹುದು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: 15 ದಿನದಲ್ಲಿ 4,500 ಫೋನ್ ಟ್ಯಾಪ್, ನೂರಾರು ದಾಖಲೆ ನಾಶ: ಹೈದರಾಬಾದ್ ಫೋನ್ ಕದ್ದಾಲಿಕೆ ಕೇಸ್ಗೆ ಬಿಗ್ ಟ್ವಿಸ್ಟ್!