ಲಖನೌ: ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನಡೆದ ಒಂದು ದಿನದ ನಂತರ ಅಯೋಧ್ಯೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಭಾರಿ ಜನಜಂಗುಳಿ ನಿರ್ಮಾಣವಾಗಿದೆ. ಜನಜಂಗುಳಿಯನ್ನು ತಡೆಗಟ್ಟಲು ಅಯೋಧ್ಯೆಯತ್ತ ಬರುತ್ತಿರುವ ಬಸ್ಗಳನ್ನು ಕನಿಷ್ಠ ಎರಡು ಗಂಟೆಗಳ ಕಾಲ ತಡೆಹಿಡಿಯುವಂತೆ ಅಯೋಧ್ಯಾ ಜಿಲ್ಲಾಧಿಕಾರಿಗಳು ಸಾರಿಗೆ ಸಂಸ್ಥೆಗೆ ಸೂಚನೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಂತರ ಲಖನೌ ಸೇರಿದಂತೆ ಇತರ ಜಿಲ್ಲೆಗಳಿಂದ ಅಯೋಧ್ಯೆಯತ್ತ ಬರುತ್ತಿದ್ದ ಸಾರಿಗೆ ಬಸ್ಗಳನ್ನು ತಡೆದು ನಿಲ್ಲಿಸಲಾಯಿತು.
ಅಲ್ಲದೆ ಈಗಾಗಲೇ ಅಯೋಧ್ಯೆಯಲ್ಲಿರುವ ಭಕ್ತರು ಹೊರಹೋಗಲು ಅನುಕೂಲವಾಗುವಂತೆ ಲಖನೌದಿಂದ 20 ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟಾರೆ 100 ಖಾಲಿ ಬಸ್ಗಳನ್ನು ಅಯೋಧ್ಯೆಗೆ ಕರೆಯಿಸಿಕೊಳ್ಳಲಾಗಿದೆ.
ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಜನರಲ್ ಮ್ಯಾನೇಜರ್ ಮತ್ತು ವಕ್ತಾರ ಅಜಿತ್ ಸಿಂಗ್ ಮಾತನಾಡಿ, "ಅಯೋಧ್ಯೆಯಲ್ಲಿ ಭಾರಿ ಸಂಖ್ಯೆಯ ಭಕ್ತರು ಜಮಾಯಿಸಿದ್ದು, ಇದು ಅಲ್ಲಿನ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ. ಕನಿಷ್ಠ ಎರಡು ಗಂಟೆಗಳ ಕಾಲ ಅಯೋಧ್ಯೆಯ ಕಡೆಗೆ ತುಂಬಿದ ಬಸ್ಗಳನ್ನು ಕಳುಹಿಸದಂತೆ ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂಚಿಸಿದ್ದಾರೆ. ಇದರ ನಂತರ, ಅಯೋಧ್ಯೆಯಲ್ಲಿ ಜಮಾಯಿಸಿದ ಭಕ್ತರನ್ನು ಬೇರೆ ಸ್ಥಳಕ್ಕೆ ಕಳುಹಿಸಲು 100 ಖಾಲಿ ಬಸ್ಗಳನ್ನು ಅಯೋಧ್ಯೆಗೆ ಕಳುಹಿಸಲಾಗಿದೆ." ಎಂದು ಹೇಳಿದರು.
ಅಯೋಧ್ಯೆಯಲ್ಲಿ ಜನಸಂದಣಿ ಕಡಿಮೆಯಾದ ನಂತರ ಲಖನೌ ಮತ್ತು ಇತರ ಸ್ಥಳಗಳಿಂದ ಅಯೋಧ್ಯೆಗೆ ಬಸ್ಗಳು ಮತ್ತೆ ಸಂಚಾರ ಆರಂಭಿಸಲಿವೆ. ಜನವರಿ 22 ರಂದು ರಾಮ ಮಂದಿರದ ಪ್ರತಿಷ್ಠಾಪನೆಯ ನಂತರ, ಜನವರಿ 23 ರಿಂದ ಭಗವಾನ್ ರಾಮನನ್ನು ನೋಡಲು ದೇವಾಲಯದ ಬಾಗಿಲುಗಳನ್ನು ಸಾರ್ವಜನಿಕರಿಗೆ ತೆರೆಯಲಾಗಿದೆ. ಹೀಗಾಗಿ ಸಾವಿರಾರು ಭಕ್ತರು ಮುಂಜಾನೆ ಮೂರು ಗಂಟೆಯಿಂದ ದರ್ಶನಕ್ಕಾಗಿ ಕ್ಯೂನಲ್ಲಿ ನಿಂತಿದ್ದರು.
ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಟ್ರಾಫಿಕ್ ಜಾಮ್ನಿಂದ ಬ್ಲಾಕ್ ಆಗಿವೆ. ಲಖನೌದ ಅವಧ್ ಬಸ್ ನಿಲ್ದಾಣದಲ್ಲಿ ಅಯೋಧ್ಯೆಗೆ ಹೋಗಲು ಭಕ್ತರ ದೊಡ್ಡ ಗುಂಪು ಕಾಯುತ್ತಿದೆ. ಆದರೆ, ಈ ಮಾರ್ಗದಲ್ಲಿ ಕೆಲ ಗಂಟೆಗಳ ಕಾಲ ಬಸ್ ಸಂಚಾರ ಬಂದ್ ಮಾಡಲಾಗಿದೆ. ಆದಾಗ್ಯೂ ಬೆಳಗ್ಗೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಲಖನೌದ ವಿವಿಧ ಬಸ್ ನಿಲ್ದಾಣಗಳಿಂದ ಅಯೋಧ್ಯೆಗೆ ತೆರಳಿದ್ದಾರೆ. ಅಯೋಧ್ಯೆಗೆ ಭೇಟಿ ನೀಡಿದ ನಂತರ ಪ್ರಯಾಣಿಕರು ಲಖನೌದ ಕಡೆಗೆ ಮರಳುತ್ತಿದ್ದಾರೆ. ಏತನ್ಮಧ್ಯೆ ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಯ ಶ್ರೀ ರಾಮ್ ಜನ್ಮಭೂಮಿ ದೇವಾಲಯದ ಆವರಣದ ಮೇಲೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ಇದನ್ನೂ ಓದಿ : ರಾಮಲಲ್ಲಾ ಕಾಣಲು ಕಾತುರ: ಮೊದಲ ದಿನವೇ 3 ಲಕ್ಷ ಭಕ್ತರಿಂದ ಪುರುಷೋತ್ತಮನ ದರ್ಶನ