ನವದೆಹಲಿ: ಮದ್ಯ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆಯಿಂದ ಸತತವಾಗಿ ಗೈರಾಗುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಕೋರ್ಟ್ ಮತ್ತೊಂದು ಸಮನ್ಸ್ ನೀಡಿದೆ. ಮಾರ್ಚ್ 16 ರಂದು ನ್ಯಾಯಾಲಯದ ಮುಂದೆ ಹಾಜರಾಗಲು ತಾಕೀತು ಮಾಡಿದೆ.
ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಇಡಿ ಈವರೆಗೆ 8 ಸಮನ್ಸ್ ನೀಡಿದೆ. ಎಲ್ಲ ಸಮನ್ಸ್‌ಗಳನ್ನು ನಿರ್ಲಕ್ಷಿಸಿ ವಿಚಾರಣೆಗೆ ಗೈರಾಗಿದ್ದಾರೆ. ಇದರಿಂದ ಪ್ರಕರಣದಲ್ಲಿ ಸಿಎಂ ಬೇಕಂತಲೇ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವಿಚಾರಣೆಗೆ ಒಳಗಾಗಲು ಸೂಚಿಸಬೇಕು ಎಂದು ಕೋರಿ ಇಡಿ ಅಧಿಕಾರಿಗಳು ಮತ್ತೊಮ್ಮೆ ಕೋರ್ಟ್ಗೆ ದೂರು ನೀಡಿದ್ದಾರೆ.
ಇಡಿಯ ಹೊಸ ದೂರಿನ ಮೇರೆಗೆ ದೆಹಲಿ ಕೋರ್ಟ್, ಸಿಎಂಗೆ ಎರಡನೇ ಬಾರಿಗೆ ಸಮನ್ಸ್ ನೀಡಿದೆ. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರು ಮಾರ್ಚ್ 16 ರಂದು ಕೇಜ್ರಿವಾಲ್ ಅವರಿಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ. ಪ್ರಕರಣದಲ್ಲಿ ನೀಡಲಾದ ಎಲ್ಲ ಸಮನ್ಸ್‌ಗಳನ್ನು ಕೈಬಿಟ್ಟಿರುವ ದೆಹಲಿ ಸಿಎಂ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಇಡಿ ಕೋರಿದೆ.
ಕೇಜ್ರಿವಾಲ್ ಅವರಿಗೆ ಈ ಹಿಂದೆಯೂ ಕೋರ್ಟ್ ಸಮನ್ಸ್ ನೀಡಿತ್ತು. ಇಡಿಯ ಮೊದಲ 3 ಸಮನ್ಸ್‌ಗಳಿಗೆ ಹಾಜರಾಗದ ಕಾರಣ ಖುದ್ದು ಹಾಜರಾಗಿ ಕಾರಣ ತಿಳಿಸಲು ನ್ಯಾಯಾಲಯ ಸೂಚಿಸಿತ್ತು. ಆದರೆ, ವಿಧಾನಸಭೆ ಬಜೆಟ್ ಅಧಿವೇಶನ ಕಾರಣ ನೀಡಿ ಖುದ್ದು ಹಾಜರಿಯಿಂದ ಗೈರಾಗಿ, ವರ್ಚುಯಲ್ ಆಗಿ ಕಾಣಿಸಿಕೊಂಡಿದ್ದರು. ಮುಂದಿನ ವಿಚಾರಣೆಯಲ್ಲಿ ತಾವೇ ಖುದ್ದಾಗಿ ಬರುವುದಾಗಿ ತಿಳಿಸಿದ್ದರು.
ಏನಿದು ಪ್ರಕರಣ?: ಮದ್ಯದ ವ್ಯಾಪಾರಿಗಳಿಗೆ ಪರವಾನಿಗೆ ನೀಡಲು ದೆಹಲಿ ಸರ್ಕಾರ 2021-22ರ ಅಬಕಾರಿ ನೀತಿಯು ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿತ್ತು ಮತ್ತು ಅದಕ್ಕಾಗಿ ಲಂಚವನ್ನು ನೀಡಿದ ಕೆಲವು ಡೀಲರ್‌ಗಳಿಗೆ ಒಲವು ತೋರಿತ್ತು ಎಂದು ಆರೋಪಿಸಲಾಗಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಇದನ್ನು ಪದೇ ಪದೆ ನಿರಾಕರಿಸಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಶಿಫಾರಸು ಮಾಡಿದರು. ಕಳೆದ ವರ್ಷ ಆಗಸ್ಟ್ 17 ರಂದು ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಪ್ರಕರಣದಲ್ಲಿ ಸಚಿವರು, ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ತೆಲಂಗಾಣ ಮಾಜಿ ಸಿಎಂ ಕೆ ಚಂದ್ರಶೇಖರ್ರಾವ್ ಅವರ ಪುತ್ರ, ಎಂಎಲ್ಸಿ ಕವಿತಾ ಅವರ ಹೆಸರೂ ಕೇಳಿಬಂದಿದೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ : ಬಿಆರ್ಎಸ್ ನಾಯಕಿ ಕವಿತಾಗೆ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್