ಮುಜಾಫರ್‌ನಗರ (ಉತ್ತರ ಪ್ರದೇಶ): ಅನಾರೋಗ್ಯದಿಂದ ಬಳಲುತ್ತಿದ್ದ ತಿಂಗಳ ಹಸುಳೆಯನ್ನು ದಂಪತಿಯು ಮಾಂತ್ರಿಕನೊಬ್ಬನ ಮಾತು ಕೇಳಿ ಬಲಿಕೊಟ್ಟ ಘಟನೆ ಉತ್ತರ ಪ್ರದೇಶದ ಬೆಲ್ಡಾ ಗ್ರಾಮದಲ್ಲಿ ನಡೆದಿದೆ. 37 ದಿನಗಳ ಹಸುಳೆಯನ್ನು ಬಲಿಕೊಟ್ಟ ಆರೋಪದಡಿ ಪತಿ ಗೋಪಾಲ್, ಆತನ ಪತ್ನಿ ಮಮತಾ ಹಾಗೂ ಮಾಂತ್ರಿಕನನ್ನು ಬಂಧಿಸಲಾಗಿದೆ.
ಹುಟ್ಟಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ದಂಪತಿಯು ಮಂಗಳವಾರ ಮಾಂತ್ರಿಕನ ಬಳಿ ತೆಗೆದುಕೊಂಡು ಹೋಗಿದ್ದರು. ಆದರೆ, ಅಲ್ಲಿಂದ ಬರುವಾಗ ದಂಪತಿ ಮಾತ್ರ ವಾಪಸ್ ಬಂದಿದ್ದರು. ಇಡೀ ರಾತ್ರಿ ಮಗುವಿನ ಅಳು ಕೇಳಿಸದಿರುವುದು ಮತ್ತು ಬೆಳಗ್ಗೆ ಕಾಣೆಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಈ ಅನುಮಾನದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ವಿಚಾರಿಸಿದಾಗ ತಂದೆ-ತಾಯಿ ಹಾರಿಕೆಯ ಉತ್ತರ ನೀಡಿದ್ದರು. ಅನುಮಾನದ ಹಿನ್ನೆಲೆ ತಮ್ಮ ಭಾಷೆಯಲ್ಲಿ ಕೇಳಿದಾಗ ಬಾಯ್ಬಿಟ್ಟಿದ್ದಾರೆ. ಅಲ್ಲದೇ ಮೂವರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ದಂಪತಿ ಸೇರಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಮಗುವಿನ ಶವದ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದು, ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳ ಹೇಳಿಕೆಗಳು ಇನ್ನೂ ಕೆಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಆದಿತ್ಯ ಬನ್ಸಾಲ್ ಮಾಹಿತಿ ನೀಡಿದ್ದಾರೆ.
ಘಟನೆ ವಿವರ: ಭೋಪಾ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲ್ಡಾ ಗ್ರಾಮದ ನಿವಾಸಿ ಗೋಪಾಲ್ ಎಂಬಾತ ತನ್ನ ಮೊದಲ ಪತ್ನಿಯ ಸಾವಿನ ನಂತರ ಪರ್ತಾಪುರದ ಮಮತಾಳನ್ನು ಎರಡನೇ ಮದುವೆಯಾಗಿದ್ದ. ಒಂದೂವರೆ ತಿಂಗಳ ಹಿಂದೆಯಷ್ಟೇ ಮಮತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಮಗು ಹುಟ್ಟಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ನೊಂದುಕೊಂಡಿದ್ದರು. ಮಾಟ ಮತ್ತು ಮಂತ್ರದ ಬಗ್ಗೆ ನಂಬಿಕೆ ಹೊಂದಿದ್ದ ದಂಪತಿಯು ಈ ನಡುವೆ ಮಾಂತ್ರಿಕನ ಬಳಿ ತೆರಳಿದ್ದರು. ಮಂಗಳವಾರ ಪುತ್ರಿಯನ್ನು ಕರೆದುಕೊಂಡು ಹೋಗಿದ್ದ ದಂಪತಿ, ರಾತ್ರಿ ಬರುವಾಗ ತಾವಿಬ್ಬರೇ ಬಂದಿದ್ದರು. ಇದು ಸ್ಥಳೀಯರ ಅನುಮಾನಕ್ಕೆ ದಾರಿ ಮಾಡಿಕೊಟ್ಟಿತ್ತು. ಮರುದಿನ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಅರಣ್ಯ ಶೋಧಿಸಿದ ಪೊಲೀಸರು: ಬುಧವಾರ ದಂಪತಿಯನ್ನು ಬಂಧಿಸಿ ವಿಚಾರಿಸಿದಾಗ ಮಾಂತ್ರಿಕನ ಮಾತು ಕೇಳಿ ತಮ್ಮ ಮಗುವನ್ನು ಬಲಿ ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಾಂತ್ರಿಕ ಜಾಡು ಹಿಡಿದು ಆತನನ್ನು ಕರೆತಂದು ವಿಚಾರಣೆ ನಡೆಸಲಾಗಿದೆ. ಮೂವರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಮಗುವಿನ ಮೃತದೇಹದ ಬಗ್ಗೆ ಕೇಳಿದಾಗ, ಮೂವರು ಬೇರೆ ಬೇರೆ ಹೇಳಿಕೆ ನೀಡುತ್ತಾ ದಾರಿ ತಪ್ಪಿಸುತ್ತಿದ್ದಾರೆ. ಆರಂಭದಲ್ಲಿ ಮಗುವಿನ ಶವವನ್ನು ಗಂಗಾನದಿಯಲ್ಲಿ ಎಸೆದೆವು ಎಂದಿದ್ದರು. ಆ ಬಳಿಕ ಗದ್ದೆಯಲ್ಲಿ ಹೂಳಲಾಗಿದೆ ಎನ್ನುತ್ತಿದ್ದಾರೆ. ಹಾಗಾಗಿ ಇವರ ನಡೆಯಿಂದ ಮತ್ತಷ್ಟು ಅನುಮಾನ ವ್ಯಕ್ತವಾಗುತ್ತಿದೆ. ಇಡೀ ಕಾಡಿನಲ್ಲಿ ಹುಡುಕಾಟ ನಡೆಸಿದರೂ ಶವ ಪತ್ತೆಯಾಗಿಲ್ಲ. ಸಿಕ್ರಿ ಮತ್ತು ಬೆಲ್ಡಾ ಎಂಬ ಅರಣ್ಯ ಪ್ರದೇಶದಲ್ಲಿ ಮಗುವಿನ ಬಟ್ಟೆ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಾಲೆ ಫೇಮಸ್ ಆಗಲೆಂದು 2ನೇ ತರಗತಿ ಬಾಲಕನ ಬಲಿ ಕೊಟ್ಟರು! - Hathras Class 2 Boy Murder Case