ಅಹಮದಾಬಾದ್: ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆಯೇ ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಘೋಷಿಸಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೇಂದ್ರದ ಪ್ರತಿಪಕ್ಷದದ ನಾಯಕ ರಾಹುಲ್ ಗಾಂಧಿ, ಗುಜರಾತ್‌ನಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿಯೇ ಸೋಲಿಸುತ್ತೆ ಎಂದು ಹೇಳಿದ್ದಾರೆ. ಅವರು (ಬಿಜೆಪಿ) ನಮಗೆ ಬೆದರಿಕೆ ಹಾಕುವ ಮತ್ತು ನಮ್ಮ ಕಚೇರಿಗೆ ಹಾನಿ ಮಾಡುವ ಮೂಲಕ ಸವಾಲು ಹಾಕಿದ್ದಾರೆ. ನಮ್ಮ ಕಚೇರಿಗೆ ಹಾನಿ ಮಾಡಿದಂತೆ ನಾವು ಅವರ ಸರ್ಕಾರವನ್ನು ಕೆಡವಲು ಹೊರಟಿದ್ದೇವೆ ಎಂದು ನಾನು ನಿಮಗೆ ಹೇಳುತ್ತೇನೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತದೆ ಮತ್ತು ನರೇಂದ್ರ ಮೋದಿ ಅವರನ್ನು ಸೋಲಿಸಿಯೇ ಸೋಲಿಸುತ್ತೇವೆ ಎಂದು ಲಿಖಿತವಾಗಿ ಬರೆದುಕೊಡುತ್ತೇನೆ. ನಾವು ಅಯೋಧ್ಯೆಯಲ್ಲಿ ಮಾಡಿದಂತೆ ಗುಜರಾತ್‌ನಲ್ಲಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಜನರಿಗೆ ಭರವಸೆ ನೀಡಿದರು.
ಗುಜರಾತ್‌ನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಮತ್ತು ಆ ರಾಜ್ಯದಿಂದ ಹೊಸ ಆರಂಭ ಮಾಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಜುಲೈ 2 ರಂದು ಅಹಮದಾಬಾದ್‌ನ ಪಾಲ್ಡಿ ಪ್ರದೇಶದ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಚೇರಿಯಾದ ರಾಜೀವ್ ಗಾಂಧಿ ಭವನದ ಹೊರಗೆ ಬಿಜೆಪಿಯ ಯುವ ಘಟಕದ ಸದಸ್ಯರು ಹಿಂದೂಗಳ ಬಗ್ಗೆ ರಾಹುಲ್ ಮಾಡಿದ್ದ ಟೀಕೆಗಳಿಗೆ ವಿರೋಧ ವ್ಯಕ್ತಪಡಿಸಲು ಜಮಾಯಿಸಿದ್ದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸದಸ್ಯರ ನಡುವೆ ಘರ್ಷಣೆ ನಡೆದಿತ್ತು, ಈ ಘರ್ಷಣೆ ಬಗ್ಗೆ ರಾಹುಲ್ ಗಾಂಧಿ ಉಲ್ಲೇಖಿಸಿ ಮಾತನಾಡಿದರು. ಪೊಲೀಸರು ನೀಡಿರುವ ಪ್ರಕಾರ, ಎರಡೂ ಕಡೆಯವರು ಕಲ್ಲು ತೂರಾಟದಲ್ಲಿ ತೊಡಗಿದ್ದರು. ಈ ಘರ್ಷಣೆಯಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಸೇರಿದಂತೆ ಐವರು ಪೊಲೀಸರು ಗಾಯಗೊಂಡಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಒಬ್ಬನೇ ಒಬ್ಬ ಸ್ಥಳೀಯ ವ್ಯಕ್ತಿಯನ್ನು ಆಹ್ವಾನಿಸದಿರುವುದನ್ನು ಕಂಡು ಅಯೋಧ್ಯೆಯ ಜನರು ಕೋಪಗೊಂಡಿದ್ದಾರೆ ಎಂದು ಹೇಳಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ, ಹೊಸ ಬಾಂಬ್ ಹಾಕಿದ ರಾಹುಲ್, ಪ್ರಧಾನಿ ಮೋದಿ ಅವರು ಅಯೋಧ್ಯೆಯಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ, ಅವರ ಸರ್ವೇಯರ್‌ಗಳು ಹಾಗೆ ಮಾಡದಂತೆ ಸಲಹೆ ನೀಡಿದ್ದರಿಂದ ಅವರು ಅಲ್ಲಿ ಸ್ಪರ್ಧಿಸುವ ಸಾಹಸ ಮಾಡಲಿಲ್ಲ ಎಂದು ಹೇಳಿದರು.
ವಿವಿಧ ದುರಂತಗಳಲ್ಲಿ ಬಲಿಯಾದವರ ಕುಟುಂಬಸ್ಥರನ್ನ ಭೇಟಿ ಮಾಡಿದ ರಾಹುಲ್: ಗುಜರಾತ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ವಿವಿಧ ದುರಂತಗಳಲ್ಲಿ ಸಾವನ್ನಪ್ಪಿದವರ ಕುಟುಂಬ ಸದಸ್ಯರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೇ ವೇಳೆ ಭೇಟಿ ಮಾಡಿದರು. ಸಂಸತ್ತಿನಲ್ಲಿ ಅವರ ಕುಂದುಕೊರತೆಗಳ ಬಗ್ಗೆ ಧ್ವನಿ ಎತ್ತುವುದಾಗಿ ಅವರು ಇದೇ ವೇಳೆ ಸಂತ್ರಸ್ತರಿಗೆ ಭರವಸೆ ನೀಡಿದರು.
ರಾಜ್‌ಕೋಟ್‌ನ ಟಿಆರ್‌ಪಿ ಗೇಮ್ ಝೋನ್ ಬೆಂಕಿ, ವಡೋದರಾದಲ್ಲಿ ದೋಣಿ ಮುಳುಗಿ ಸಂಭವಿಸಿದ ಘಟನೆ, 2022 ರ ಮೋರ್ಬಿ ಸೇತುವೆ ಕುಸಿತ ಮತ್ತು 2016 ರ ಉನಾ ದಲಿತ ಥಳಿತ ಪ್ರಕರಣದ ಸಂತ್ರಸ್ತರ ಸಂಬಂಧಿಕರನ್ನು ಪಾಲ್ಡಿ ಪ್ರದೇಶದ ಗುಜರಾತ್ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಭೇಟಿ ಮಾಡಿ ರಾಹುಲ್ ಗಾಂಧಿ ಸಾಂತ್ವನ ಹೇಳಿದರು.
ಇದನ್ನು ಓದಿ: ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ: ಯೋಧ ಹುತಾತ್ಮ - Kulgam encounter