ಕೋಲ್ಕತ್ತಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹಣೆಗೆ ಪೆಟ್ಟು ಬಿದ್ದಿದೆ. ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಇಂದು ಕಾಲಿಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮಮತಾ ಬ್ಯಾನರ್ಜಿ ಇದ್ದರು. ತಮ್ಮ ಕೋಣೆಯಿಂದ ಹೊರಬರುವಾಗ ಅವರು ಮುಗ್ಗರಿಸಿ ಕೆಳಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಹಣೆಗೆ ಗಾಯವಾಗಿದ್ದು, ರಕ್ತಸ್ರಾವ ಸಹ ಉಂಟಾಗಿದೆ. ಅಲ್ಲದೇ, ತಲೆತಿರುಗುವಿಕೆ ಕೂಡ ಉಂಟಾಗಿದೆ ಎಂದು ತಿಳಿದು ಬಂದಿದೆ.
ತಕ್ಷಣವೇ ಅವರನ್ನು ಎಸ್‌ಎಸ್‌ಕೆಎಂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆಗಾಗಿ ವುಡ್‌ಬರ್ನ್ ವಾರ್ಡ್‌ಗೆ ದಾಖಲಿಸಲಾಗಿದೆ. ಮುಖ್ಯಮಂತ್ರಿಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ತಂಡ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಮತ್ತು ಪಕ್ಷದ ಹಲವು ಮುಖಂಡರು ಕೂಡ ಆಸ್ಪತ್ರೆಗೆ ದೌಡಾಯಿಸಿದ್ದಾರೆ.