ಮುಂಬೈ: ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದ್ದ ಬದ್ಲಾಪುರ್ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂಧೆ ಎಂಬಾತ ಪೊಲೀಸ್ ಗುಂಡಿಗೆ ಬಲಿಯಾಗಿದ್ದಾನೆ. ಈ ಘಟನೆಯ ಕುರಿತು ಮಹಾರಾಷ್ಟ್ರ ಅಪರಾಧ ತನಿಖಾ ದಳ (ಸಿಐಡಿ) ತನಿಖೆ ನಡೆಸುತ್ತಿದೆ.
ಬದ್ಲಾಪುರ್ನಲ್ಲಿ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಶಿಂಧೆ, ಗುತ್ತಿಗೆ ನೌಕರನಾಗಿ ಶಾಲೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದ. ಶಾಲೆಯ ಶೌಚಾಲಯದಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಗಂಭೀರ ಆರೋಪ ಈತನ ಮೇಲಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಘಟನೆಯನ್ನು ವಿರೋಧಿಸಿ ಬದ್ಲಾಪುರ ರೈಲು ನಿಲ್ದಾಣದಲ್ಲಿ ಭಾರಿ ಪ್ರತಿಭಟನೆ ಕೂಡಾ ನಡೆದಿತ್ತು.
ಆರೋಪಿಯ ಮಾಜಿ ಪತ್ನಿ ನೀಡಿದ ದೂರಿನ ಮೇರೆಗೆ ತನಿಖೆಗಾಗಿ ನಿನ್ನೆ ಸಂಜೆ ಶಿಂಧೆಯನ್ನು ಪೊಲೀಸರು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಥಾಣೆಯ ಮುಂಬೈ ಬೈಪಾಸ್ನಲ್ಲಿ ಆರೋಪಿ ಪೊಲೀಸರ ಬಳಿಯಿದ್ದ ಗನ್ ಕಿತ್ತುಕೊಂಡು ಹಲ್ಲೆಗೆ ಮುಂದಾಗಿದ್ದಾನೆ ಎಂದು ಹೇಳಲಾಗಿದೆ. ಈ ವೇಳೆ ಸ್ವಯಂ ರಕ್ಷಣೆಗೆ ಮುಂದಾದ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ಗುಂಡು ತಗುಲಿ ಆರೋಪಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಪೊಲೀಸ್ ಕಸ್ಟಡಿಯಲ್ಲಿರುವ ಸಂದರ್ಭದಲ್ಲಿ ಸಾವನ್ನಪ್ಪಿದ ಕಾರಣ, ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಸಿಐಡಿ ಅಧಿಕಾರಿಗಳ ತಂಡ ಮುಂಬೈ ಬೈಪಾಸ್ಗೆ ಭೇಟಿ ನೀಡಿದ್ದು, ಎನ್ಕೌಂಟರ್ ಸಮಯದಲ್ಲಿ ವಾಹನದಲ್ಲಿದ್ದ ಸಿಬ್ಬಂದಿಯ ಹೇಳಿಕೆ ದಾಖಲಿಸಿದ್ದಾರೆ. ಇದರ ಜೊತೆಗೆ ಅಕ್ಷಯ್ ಶಿಂಧೆ ಪೋಷಕರ ಹೇಳಿಕೆಯನ್ನೂ ಪಡೆಯಲಿದ್ದಾರೆ.
ಶಿಂಧೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳವಾರ ಕಲ್ವಾ ಸಿವಿಕ್ ಆಸ್ಪತ್ರೆಯಿಂದ ಸರ್ಕಾರದ ಜೆ.ಜೆ.ಆಸ್ಪತ್ರೆಗೆ ತರಲಾಗಿದೆ. ಕ್ಯಾಮೆರಾ ಕಣ್ಗಾವಲಿನಲ್ಲಿ ತಜ್ಞ ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಲಿದೆ. ಅಕ್ಷಯ್ ಶಿಂಧೆ ಪೋಷಕರು ಈ ಸಾವಿನ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ.
ಪ್ರತಿಪಕ್ಷಗಳ ಟೀಕೆ: ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಿ, "ಮೊದಲು ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ವಿಳಂಬ ಮಾಡಲಾಗಿದೆ. ಈಗ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವನ್ನಪ್ಪಿದ್ದಾನೆ. ಇದು ಕಾನೂನು ಸುವ್ಯವಸ್ಥೆ ಮತ್ತು ನ್ಯಾಯ ವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ನಿದರ್ಶನ" ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: Watch.. ಮಲಾರಿ ರಾಷ್ಟ್ರೀಯ ಹೆದ್ದಾರಿ ಮೇಲೆ ನೋಡ ನೋಡುತ್ತಲೇ ಪರ್ವತ ಕುಸಿತ: ಸಂಚಾರ ಸ್ಥಗಿತ