ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ 'ಗಾಮಿನಿ' ಭಾನುವಾರ ಐದು ಮರಿಗಳಿಗೆ ಜನ್ಮ ನೀಡಿತು. ಈ ಮೂಲಕ ದೇಶದ ಒಟ್ಟು ಚೀತಾಗಳ ಸಂಖ್ಯೆ 26ಕ್ಕೆ ಏರಿದೆ ಎಂದು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಹೈ ಫೈವ್, ಕುನೋ! ದಕ್ಷಿಣ ಆಫ್ರಿಕಾದ ತ್ಸ್ವಾಲು ಕಲಹರಿ ಮೀಸಲು ಅರಣ್ಯ ಪ್ರದೇಶದಿಂದ ತಂದಿದ್ದ ಸುಮಾರು 5 ವರ್ಷ ವಯಸ್ಸಿನ ಹೆಣ್ಣು ಚೀತಾ ಗಾಮಿನಿ ಇಂದು ಐದು ಮರಿಗಳಿಗೆ ಜನ್ಮ ನೀಡಿದೆ. ಭಾರತದಲ್ಲಿ ಜನಿಸಿದ ಚೀತಾಗಳ ಸಂಖ್ಯೆ ಈಗ 13 ತಲುಪಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಚಿರತೆ ಜ್ವಾಲಾ (ನಮೀಬಿಯಾದ ಹೆಸರು ಸಿಯಾಯಾ) ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆ ಪೈಕಿ ಒಂದು ಮರಿ ಮಾತ್ರ ಬದುಕುಳಿದಿತ್ತು. ಜ್ವಾಲಾ ಈ ವರ್ಷದ ಜನವರಿಯಲ್ಲಿ ಎರಡನೇ ಬಾರಿ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದಳು. ಅದರ ನಂತರ ಚಿರತೆ ಆಶಾ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಚೀತಾಗಳಿಗೆ ಒತ್ತಡ ಮುಕ್ತ ವಾತಾವರಣ ನಿರ್ಮಿಸಿದ ಅರಣ್ಯ ಅಧಿಕಾರಿಗಳು, ಪಶುವೈದ್ಯರು ಮತ್ತು ಕ್ಷೇತ್ರ ಸಿಬ್ಬಂದಿಯ ತಂಡಕ್ಕೆ ಅಭಿನಂದನೆಗಳು, ಇದು ಯಶಸ್ವಿ ಮಿಲನ ಮತ್ತು ಮರಿಗಳ ಜನನಕ್ಕೆ ಕಾರಣವಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಮಹತ್ವಾಕಾಂಕ್ಷೆಯ ಚೀತಾ ಮರುಪರಿಚಯ ಯೋಜನೆಯಡಿ, ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ಒಳಗೊಂಡ ಎಂಟು ನಮೀಬಿಯಾದ ಚೀತಾಗಳನ್ನು 2022 ರ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದ ಆವರಣದಲ್ಲಿ ಬಿಡುಗಡೆ ಮಾಡಲಾಯಿತು. ಫೆಬ್ರವರಿ 2023ರಲ್ಲಿ, ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳನ್ನು ಉದ್ಯಾನವನಕ್ಕೆ ತರಲಾಯಿತು. ಗಾಮಿನಿ ದಕ್ಷಿಣ ಆಫ್ರಿಕಾದಿಂದ ತಂದ ಗುಂಪಿನ ಭಾಗವಾಗಿದೆ.
ಇದನ್ನೂ ಓದಿ: ಅಸ್ಸಾಂನ ಟೀ ತೋಟಕ್ಕೆ ಭೇಟಿ ನೀಡಿದ ಮೋದಿ; ಚಹಾ ತೋಟಗಳಿಗೆ ಭೇಟಿ ನೀಡುವಂತೆ ಪ್ರವಾಸಿಗರಿಗೆ ಮನವಿ