ನವದೆಹಲಿ: ಜಮ್ಮು ಕಾಶ್ಮೀರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿತು.
ಜಮ್ಮು ಕಾಶ್ಮೀರಕ್ಕೆ 3 ಹಂತಗಳಲ್ಲಿ ಮತದಾನ: ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್, "ಜಮ್ಮು ಕಾಶ್ಮೀರದ ವಿಧಾನಸಭೆ ಚುನಾವಣೆ ಸೆ.18, ಸೆ.25 ಹಾಗೂ ಅಕ್ಟೋಬರ್ 1ರಂದು ಒಟ್ಟು ಮೂರು ಹಂತದಲ್ಲಿ ನಡೆಯಲಿದೆ. ಹರಿಯಾಣದ ವಿಧಾನಸಭೆ ಚುನಾವಣೆ ಅ.1ರಂದು ನಡೆಯಲಿದೆ. ಎರಡೂ ರಾಜ್ಯಗಳ ಮತ ಎಣಿಕೆ ಅ.4ರಂದು ಜರುಗಲಿದೆ" ಎಂದು ತಿಳಿಸಿದರು.
In true spirit of keeping promises, here is a shorter electioneering period and in the best possible conducive weather. Schedule for Elections in J&K to be held in 3 phases : CEC Kumar pic.twitter.com/ck9tFVoFFD
— Election Commission of India (@ECISVEEP) August 16, 2024
"ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯ ಪರಿಸ್ಥಿತಿಯನ್ನು ನಾವು ಪರಿಶೀಲಿಸಿದ್ದೇವೆ. ಅವರೆಲ್ಲರೂ ಸಾಧ್ಯವಾದಷ್ಟು ಬೇಗ ಚುನಾವಣೆ ನಡೆಯಲು ಮತ್ತು ಮತದಾನದಲ್ಲಿ ಭಾಗವಹಿಸಲು ಬಯಸಿದ್ದಾರೆ. ಹಾಗಾಗಿ, ಇದು ಬುಲೆಟ್ ವಿರುದ್ಧದ ಬ್ಯಾಲೆಟ್‌ನ ವಿಜಯವಾಗಿದೆ. ಕಾಶ್ಮೀರ ಕಣಿವೆ ಹಿಂಸೆಯನ್ನು ತಿರಸ್ಕರಿಸಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಲಿದ್ದು, ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ" ಎಂದು ಹೇಳಿದರು.
"ಚುನಾವಣಾ ಪ್ರಚಾರ ಕಾರ್ಯ ಭಯವಿಲ್ಲದೆ ನಡೆಯಬೇಕು. ಈ ಬಾರಿ ಯುವಕರನ್ನು ಚುನಾವಣೆಯ ರಾಯಭಾರಿಗಳನ್ನಾಗಿ ಮಾಡಲು ಬಯಸುತ್ತೇವೆ. ಆಗಸ್ಟ್ 19ರಂದು ಅಮರನಾಥ ಯಾತ್ರೆ ಮುಕ್ತಾಯಗೊಳ್ಳಲಿದ್ದು, ಆಗಸ್ಟ್ 20ರಂದು ಮತದಾರರ ಪಟ್ಟಿ ಪ್ರಕಟಿಸಲಾಗುವುದು" ಎಂದರು.
"ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 74 ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, 7 ಮತ್ತು 9 ಸ್ಥಾನಗಳು ಕ್ರಮವಾಗಿ ಎಸ್‌ಸಿ ಮತ್ತು ಎಸ್‌ಟಿಗೆ ಮೀಸಲಾಗಿದೆ. ರಾಜ್ಯದಲ್ಲಿ ಒಟ್ಟು 11,838 ಮತಗಟ್ಟೆಗಳಿವೆ" ಎಂದು ಮಾಹಿತಿ ನೀಡಿದರು.
Schedule for Elections in #Haryana to be held in a single phase .
— Election Commission of India (@ECISVEEP) August 16, 2024
Details in images pic.twitter.com/YerZLCvUTa
"ಹರಿಯಾಣದಲ್ಲಿ 90 ವಿಧಾನಸಭಾ ಕ್ಷೇತ್ರಗಳಿವೆ. ಆಗಸ್ಟ್ 27ರಂದು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ರಾಜ್ಯದಲ್ಲಿ ಒಟ್ಟು 20,629 ಮತಗಟ್ಟೆಗಳಿವೆ. ಈ ಪೈಕಿ ನಗರ ಪ್ರದೇಶಗಳಲ್ಲಿ 7,132 ಮತಗಟ್ಟೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 13,497 ಮತಗಟ್ಟೆಗಳಿವೆ. ಎಲ್ಲಾ ಮತಗಟ್ಟೆಗಳಲ್ಲಿಯೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ" ಎಂದು ತಿಳಿಸಿದರು.
ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ವೈದ್ಯೆ ಅತ್ಯಾಚಾರ, ಕೊಲೆ ಖಂಡಿಸಿ ನಾಳೆ ದೇಶಾದ್ಯಂತ ಐಎಂಎ ಪ್ರತಿಭಟನೆ: ಹೊರರೋಗಿ ಸೇವೆ ಬಂದ್ - IMA Nationwide Protest