ನವದೆಹಲಿ: ಕ್ಲಾಸ್ 10 ಮತ್ತು 12 ಬೋರ್ಡ್ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಜರಾತಿ ಕುರಿತು ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಸಿ)ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಅದರ ಅನುಸಾರ ಪ್ರಮುಖ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾಗಲು ಶೇ 75ರಷ್ಟು ಹಾಜರಾತಿ ಕಡ್ಡಾಯವಾಗಿದೆ ಎಂದು ಅದು ತಿಳಿಸಿದೆ.
ಇತ್ತೀಚಿಗೆ ಈ ಸಂಬಂಧ ಹೊಸ ಅಧಿಸೂಚನೆ ಹೊರಡಿಸಿದ್ದು, ಶೈಕ್ಷಣಿಕ ಜೀವನವನ್ನು ಮೀರಿ ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಶಾಲೆಗಳು ನಿರ್ಣಾಯಕ ಪಾತ್ರವನ್ನು ಹೊಂದಿದೆ. ಶಾಲೆಗಳು ಅವರ ಪಠ್ಯೇತರ ಚಟುವಟಿಕೆ, ವ್ಯಕ್ತಿತ್ವ ನಿರ್ಮಾಣ, ತಂಡದ ಕೆಲಸ ಹಾಗೂ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ವಾತಾವರಣವನ್ನು ಹೊಂದಿದೆ. ಈ ಕಲಿಕಾ ವಾತಾವರಣದ ಸಂಪೂರ್ಣ ಪ್ರಯೋಜನ ಪಡೆಯಲು ನಿಯಮಿತ ಹಾಜರಾತಿ ಅಗತ್ಯ ಎಂದು ಪರಿಗಣಿಸಲಾಗಿದೆ. ಸಿಬಿಎಸ್ಸಿ ಪರೀಕ್ಷೆಯ ಉಪ ಕಾನೂನು ವಿಶೇಷವಾಗಿ 13 ಮತ್ತು 14 ವಿದ್ಯಾರ್ಥಿಗಳ ಶೇ 75ರಷ್ಟು ಹಾಜರಾತಿ ಕುರಿತು ಹೇಳುತ್ತದೆ. ಶಾಲೆಗಳನ್ನು ಇದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ತುರ್ತು ಅಗತ್ಯಗಳಿಗೆ ಶೇ 25 ರಷ್ಟು ವಿನಾಯಿತಿ: ಗಂಭೀರ ವೈದ್ಯಕೀಯ ಪರಿಸ್ಥಿತಿ, ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮ ಅಥವಾ ತುರ್ತು ಪರಿಸ್ಥಿತಿಗಳಂತಹ ಕೆಲವು ಅಸಾಧಾರಣ ಪರಿಸ್ಥಿತಿ ಹಿನ್ನಲೆ ಶೇ 25ರಷ್ಟು ಹಾಜರಾತಿಯನ್ನು ಕೈ ಬಿಡಲಾಗಿದೆ. ಆದಾಗ್ಯೂ ಈ ಕುರಿತು ಶಾಲೆಗಳು ಸರಿಯಾದ ದಾಖಲಾತಿ ಅಂದರೆ ವೈದ್ಯಕೀಯ ಪ್ರಮಾಣ ಪತ್ರ ಅಥವಾ ಸಂಬಂಧಿಸಿದ ಕ್ರೀಡಾ ಪ್ರಾಧಿಕಾರದಿಂದ ಅಧಿಕಾರಿಗಳ ಪತ್ರವನ್ನು ಸಲ್ಲಿಸುವ ಮೂಲಕ ಅವರ ಹಾಜರಾತಿ ಕಾರಣವನ್ನು ಸ್ಪಷ್ಟವಾಗಿ ತಿಳಿಸಬೇಕಿದೆ.
ಶೇ 75ರಷ್ಟು ಹಾಜರಾತಿ ಕಡ್ಡಾಯ ನಿಯಮದಿಂದ ಸಿಬಿಎಸ್ಸಿ ಕೇವಲ ಶೈಕ್ಷಣಿಕ ಸಾಧನೆಗೆ ಮಾತ್ರ ಪ್ರೋತ್ಸಾಹ ನೀಡದೇ, ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ನಿಯಮಿತ ಶಾಲಾ ಹಾಜರಾತಿ ಕಡ್ಡಾಯವಾಗಿದೆ ಎಂದು ಮಂಡಳಿ ಸುತ್ತೋಲೆಯಲ್ಲಿ ಒತ್ತಿ ಹೇಳಿದೆ.
ವಿದ್ಯಾರ್ಥಿಗಳಲ್ಲಿ ಸ್ಥಿರವಾದ ಕಲಿಕಾ ವಾತಾವರಣವನ್ನು ಬೆಳೆಸುವ ಮೂಲಕ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡಿ ಅವರ ವೈಯಕ್ತಿಕ ಬೆಳವಣಿಗೆ ಮತ್ತು ಭವಿಷ್ಯದ ಯಶಸ್ಸಿಗೆ ಸಹಾಯ ಮಾಡಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಶಿಕ್ಷಕನಿಗೆ ₹8 ಸಾವಿರ, ವಾಚ್ಮನ್ಗೆ ₹10 ಸಾವಿರ ಸಂಬಳ: ಅಚ್ಚರಿಯ ನೇಮಕಾತಿ ಅಧಿಸೂಚನೆ