ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಈಗಾಗಲೇ ಮತ ಎಣಿಕೆ ಆರಂಭವಾಗಿದ್ದು, ಅಭ್ಯರ್ಥಿಗಳ ಎದೆಬಡಿತ ಜೋರಾಗಿದೆ. ಗೆಲುವಿನ ನಿರೀಕ್ಷೆಯಲ್ಲಿರುವ ಸ್ಪರ್ಧಾ ಅಭ್ಯರ್ಥಿಗಳು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.
ನವದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾನ್ಸುರಿ ಸ್ವರಾಜ್ ದೆಹಲಿಯ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ (ಬಿರ್ಲಾ ಮಂದಿರ) ಪ್ರಾರ್ಥನೆ ಸಲ್ಲಿಸಿದರು. ಬಾನ್ಸುರಿ ಸ್ವರಾಜ್ ಮಾಜಿ ವಿದೇಶಾಂಗ ಸಚಿವೆ, ದಿವಂಗತ ಸುಷ್ಮಾ ಸ್ವರಾಜ್ ಪುತ್ರಿ.
ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾರ್ತಿ ಚಿದಂಬರಂ ಅವರು ಶಿವಗಂಗಾ ಜಿಲ್ಲೆಯ ಕಾರೈಕುಡಿಯ ಕಾಳಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಬೆಂಗಳೂರಿನ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ಮತ್ತು ಖಜುರಾಹೊ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಡಿ ಶರ್ಮಾ ಅವರು ಮತ ಎಣಿಕೆಗೆ ಮುನ್ನ ಪನ್ನಾದಲ್ಲಿರುವ ಜುಗಲ್ ಕಿಶೋರ್ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರ್ಷ್ ಮಲ್ಹೋತ್ರಾ ಅವರು ಮತ ಎಣಿಕೆಗೆ ಮುನ್ನ ತಮ್ಮ ನಿವಾಸದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಉತ್ತರ ಪ್ರದೇಶದ ಬಿಜೆಪಿ ಸಂಸದ ಮತ್ತು ಗೋರಖ್‌ಪುರದ ಅಭ್ಯರ್ಥಿ ರವಿ ಕಿಶನ್ ಗೋರಖ್‌ಪುರದ ಪಂಚಮುಖಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇನ್ನು ಬಿಹಾರದ ಪಾಟ್ನಾದಲ್ಲಿ ಬಿಜೆಪಿ ಕಾರ್ಯಕರ್ತರು ಹವನ ಮತ್ತು ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಜಡ್ಜ್ಮೆಂಟ್ ಡೇ: ಅಂಚೆ ಮತ ಎಣಿಕೆ ಆರಂಭ, ಗೆಲುವಿಗಾಗಿ ದೇವರ ಮೊರೆ ಹೋದ ಅಭ್ಯರ್ಥಿಗಳು - LOK SABHA ELECTION RESULTS 2024