ಕೋಲ್ಕತ್ತಾ(ಪಶ್ಚಿಮ ಬಂಗಾಳ): ಭಾರಿ ಸಂಚಲನ ಸೃಷ್ಟಿಸಿರುವ ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 24 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕಾತಿಯನ್ನು 'ಅಕ್ರಮ' ಎಂದು ಪರಿಗಣಿಸಿರುವ ಕೋಲ್ಕತ್ತಾ ಹೈಕೋರ್ಟ್, ಪರೀಕ್ಷೆ ರದ್ದು ಮಾಡಿ ಸೋಮವಾರ ಆದೇಶಿಸಿದೆ. ಇದು ತೃಣಮೂಲ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ ತಂದಿದ್ದು, ತೀರ್ಪನ್ನು ಕಾನೂನುಬಾಹಿರ ಎಂದು ಟೀಕಿಸಿದೆ.
ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಾಕ್ ಮತ್ತು ಎಂಡಿ ಶಬ್ಬರ್ ರಶೀದಿ ಅವರನ್ನೊಳಗೊಂಡ ವಿಭಾಗೀಯ ಪೀಠವು ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ- 2016 ಮೂಲಕ ನಡೆದ ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸುವಂತೆ ಆದೇಶಿಸಿದರು. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಂಡು ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹೈಕೋರ್ಟ್ ನಿರ್ದೇಶನ ನೀಡಿದೆ.
ಹೊಸದಾಗಿ ನೇಮಕ ನಡೆಸಿ: ಇದೇ ವೇಳೆ, ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಅರ್ಜಿದಾರರು ಮಾಡಿದ ಮನವಿಯನ್ನೂ ವಿಭಾಗೀಯ ಪೀಠವು ತಿರಸ್ಕರಿಸಿತು. ಜೊತೆಗೆ, ಹೊಸದಾಗಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವಂತೆ ಬಂಗಾಳ ಶಾಲಾ ಸೇವಾ ಆಯೋಗಕ್ಕೆ ಪೀಠವು ಸೂಚಿಸಿತು.
ಆದೇಶ ಹೊರಬಿದ್ದ ಬೆನ್ನಲ್ಲೇ, ಕೋರ್ಟ್ ಹೊರಗೆ ಕಾಯುತ್ತಿದ್ದ ನೂರಾರು ಆಕಾಂಕ್ಷಿಗಳು ಸಂಭ್ರಮಿಸಿದರು. "ನಾವು ಈ ದಿನಕ್ಕಾಗಿ ಕಾಯುತ್ತಿದ್ದೆವು. ವರ್ಷಗಳ ಹೋರಾಟದ ನಂತರ ಅಂತಿಮವಾಗಿ ನ್ಯಾಯ ಸಿಕ್ಕಿದೆ ಎಂದು ಆಕಾಂಕ್ಷಿಯೊಬ್ಬರು ಹೇಳಿದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಫಿರ್ದೌಸ್ ಶಮೀಮ್ ಅವರು, 24,640 ಖಾಲಿ ಹುದ್ದೆಗಳಿಗೆ 23 ಲಕ್ಷ ಅಭ್ಯರ್ಥಿಗಳು ಎಸ್ಎಲ್ಎಸ್ಟಿ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಆಯೋಗವು 25,753 ನೇಮಕಾತಿ ಪತ್ರಗಳನ್ನು ನೀಡಿ ಅಕ್ರಮ ಎಸಗಿದೆ ಎಂದು ಆರೋಪಿಸಿದರು.
ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಕೋಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ವಿಭಾಗೀಯ ಪೀಠವನ್ನು ರಚಿಸಿದ್ದರು. ಪ್ರಕರಣದ ಕುರಿತು ಪರ-ವಿರೋಧದ ಹಲವು ಅರ್ಜಿಗಳನ್ನು ವಿಚಾರಣೆಯನ್ನು ಪೀಠವು ಕಳೆದ ಮಾರ್ಚ್ 20ರಂದು ಮುಕ್ತಾಯಗೊಳಿಸಿ, ತೀರ್ಪನ್ನು ಕಾಯ್ದಿರಿಸಿತ್ತು. ಇದಕ್ಕೂ ಮೊದಲು ವಿಚಾರಣೆ ನಡೆಸಿದ್ದ ಮಾಜಿ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿದ್ದ ಏಕಸದಸ್ಯ ಪೀಠ ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಿತ್ತು. ವಿಚಾರಣೆ ನಡೆಸಿದ ಸಿಬಿಐ, ಪ್ರಕರಣದಲ್ಲಿ ಮಾಜಿ ಶಿಕ್ಷಣ ಸಚಿವ, ಟಿಎಂಸಿ ನಾಯಕ ಪಾರ್ಥ ಚಟರ್ಜಿ ಸೇರಿದಂತೆ ಶಾಲಾ ಸೇವಾ ಆಯೋಗದ ಹಲವು ಅಧಿಕಾರಿಗಳನ್ನು ಬಂಧಿಸಿತ್ತು.
ಸಿಎಂ ಮಮತಾ ಆಕ್ಷೇಪ: ಶಿಕ್ಷಕರ ನೇಮಕಾತಿಯನ್ನು ರದ್ದು ಮಾಡಿದ ಹೈಕೋರ್ಟ್ ತೀರ್ಪನ್ನು ಸಿಎಂ ಮಮತಾ ಬ್ಯಾನರ್ಜಿ ಅವರು ಕಾನೂನುಬಾಹಿರ ಎಂದಿದ್ದಾರೆ. ತಮ್ಮ ಸರ್ಕಾರವು ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಿದ್ದೇವೆ ಎಂದಿದ್ದಾರೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರ ನ್ಯಾಯಾಂಗದ ಮೇಲೆ ಪ್ರಭಾವ ಬೀರುತ್ತಿದೆ. ಕೆಲಸ ಕಳೆದುಕೊಂಡವರ ಪರವಾಗಿ ನಿಲ್ಲುತ್ತೇವೆ. ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದಿದ್ದಾರೆ.
ಮಾಜಿ ನ್ಯಾಯಾಧೀಶರು ಹೇಳೋದೇನು?: ಇದೇ ಪ್ರಕರಣವನ್ನು ವಿಚಾರಣೆ ನಡೆಸಿ ಸಿಬಿಐ ತನಿಖೆಗೆ ನೀಡಿದ್ದ ಮಾಜಿ ನ್ಯಾಯಾಧೀಶ, ಪ್ರಸ್ತುತ ಸಿಎಂ ಮಮತಾ ಹಾಕಿದ ಸವಾಲು ಸ್ವೀಕರಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಅಭಿಜಿತ್ ಗಂಗೋಪಾಧ್ಯಾಯ ಅವರು ತೀರ್ಪನ್ನು ಸ್ವಾಗತಿಸಿದ್ದಾರೆ. 2016 ರಲ್ಲಿ ನೇಮಕಗೊಂಡ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ರದ್ದುಗೊಳಿಸುವ ಮೂಲಕ ತಮ್ಮ ಮೂಲ ಆದೇಶವನ್ನು ವಿಭಾಗೀಯ ಪೀಠ ಎತ್ತಿಹಿಡಿದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ: ಇಡಿ ವಿಚಾರಣೆಗೆ ಹಾಜರಾಗಲ್ಲ ಎಂದ ತೃಣಮೂಲ ಸಂಸದ ಬ್ಯಾನರ್ಜಿ