ಸಾಂಬಾ(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಬಳಿ ಹೋಮ್ಸ್ಟೇ ತೆರೆದುಕೊಂಡಿದ್ದು, ಜಿಲ್ಲೆಯ ಮಾಜಿ ಸರಪಂಚ್ ಮೋಹನ್ ಸಿಂಗ್ ಭಟ್ಟಿ ತಮ್ಮ ಹೊಸ ಹೋಮ್ಸ್ಟೇಗೆ ಪ್ರವಾಸಿಗರನ್ನು ಬರಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಮೂರು ವರ್ಷಗಳ ಹಿಂದೆ ಇದೇ ತಿಂಗಳು ಭಾರತ ಹಾಗೂ ಪಾಕಿಸ್ತಾನದ ನಡುವೆ ನವೀಕೃತ ಕದನ ವಿರಾಮ ಜಾರಿಗೆ ಬಂದ ನಂತರ ಕಂಡುಬಂದಿರುವ ಬದಲಾವಣೆ ಇದಾಗಿದೆ.
ಗಡಿಯಲ್ಲಿ ಶಾಂತಿ ನೆಲೆಸಿರುವ ಹಿನ್ನೆಲೆಯಲ್ಲಿ ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಜಮ್ಮು ಹಾಗೂ ಕಾಶ್ಮೀರ ಆಡಳಿತ, ರಾಮಗಢ ವಲಯದ ಪ್ರಸಿದ್ಧ ಬಾಬಾ ಚಾಮ್ಲಿಯಾಲ್ ದೇಗುಲದ ಸಮೀಪದಲ್ಲಿ ಹೋಮ್ ಸ್ಟೇಗಳ ನಿರ್ಮಾಣಕ್ಕೆ ಇತ್ತೀಚೆಗೆ ಒಪ್ಪಿಗೆ ನೀಡಿತ್ತು.
ಹಿಂದೆ ಇಂಡೋ-ಪಾಕಿಸ್ತಾನ ಸ್ನೇಹದ ಸಂಕೇತ ಎಂದು ಪರಿಗಣಿಸಲಾಗಿದ್ದ, ಶೂನ್ಯ ರೇಖೆಯಲ್ಲಿರುವ ಪ್ರಸಿದ್ಧ ದೇವಾಲಯ ಬಾಬಾ ಚಾಮ್ಲಿಯಾಲ್ಗೆ ದೇಶಾದ್ಯಂತದಿಂದ, ವಿಶೇಷವಾಗಿ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಈ ದೇವಾಲಯಕ್ಕೆ ಪಾಕಿಸ್ತಾನದ ಪ್ರತಿನಿಧಿಗಳು ಪೂಜೆ ಸಲ್ಲಿಸಲು ಬರುತ್ತಿದ್ದರು. ಆದರೆ 2018ರ ಜೂನ್ 13 ರಂದು ಗಡಿಯಾಚೆಗಿನ ದಾಳಿಯಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಸೇರಿದಂತೆ ನಾಲ್ಕು ಬಿಎಸ್ಎಫ್ ಸಿಬ್ಬಂದಿ ಸಾವನ್ನಪ್ಪಿದ ನಂತರ ಪೂಜೆಗೆ ಬರುವುದು ನಿಂತಿತು. ಕಳೆದ ವರ್ಷ ನವೆಂಬರ್ 8ರ ಮಧ್ಯರಾತ್ರಿ ರಾಮಗಢ ಸೆಕ್ಟರ್ನಲ್ಲಿ ಪಾಕಿಸ್ತಾನ ರೇಂಜರ್ಗಳ ಗುಂಡಿನ ದಾಳಿಯಲ್ಲಿ ಬಿಎಸ್ಎಫ್ ಜವಾನ ಸಾವನ್ನಪ್ಪಿದ್ದರು. 2021ರ ಫೆಬ್ರವರಿ 25ರಂದು ಉಭಯ ದೇಶಗಳು ನವೀಕೃತ ಕದನ ವಿರಾಮದ ಒಪ್ಪಂದವನ್ನು ಮಾಡಿಕೊಂಡ ನಂತರ, ಸಂಭವಿಸಿದ ಮೊದಲ ಸಾವಾಗಿತ್ತು.
ಇದೀಗ ಮೋಹನ್ ಸಿಂಗ್ ಭಟ್ಟಿ ಅವರು ಗಡಿಭಾಗದ ಫತ್ವಾಲ್ನ ದಗ್ ಚನ್ನಿ ಗ್ರಾಮದಲ್ಲಿ ಎರಡು ಅಂತಸ್ತಿನ ಹೋಮ್ ಸ್ಟೇ ಪ್ರಾರಂಭಿಸಿದ್ದಾರೆ. ಇದರ ಜೊತೆಗೆ ಪ್ರವಾಸಿಗರಿಗೆ ಗಡಿಯಲ್ಲಿರುವ ಭಾವನೆ ಮೂಡಿಸಲು ಹಾಗೂ ಗಡಿಯಾಚೆಗಿನ ಶೆಲ್ ದಾಳಿಯ ಸಂದರ್ಭದಲ್ಲಿ ಯಾವುದೇ ಹಾನಿಯಾಗದಂತೆ ಸುರಕ್ಷತಾ ಕ್ರಮ, ಈ ಎರಡು ಉದ್ದೇಶಗಳೊಂದಿಗೆ ಸುಸಜ್ಜಿತ ಭೂಗತ ಬಂಕರ್ ಅನ್ನು ಸಹ ನಿರ್ಮಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಭಟ್ಟಿ, "ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದಂತೆ ನಾವು ನಮ್ಮ ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಅನಗತ್ಯ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ನಾವು ಸಿದ್ಧರಾಗಿರಬೇಕು" ಎಂದು ಹೇಳಿದರು.
ಸಾಂಬಾ ಉಪ ಆಯುಕ್ತ ಅಭಿಷೇಕ್ ಶರ್ಮಾ ಅವರು ಮಾತನಾಡಿ, "ಜಿಲ್ಲೆಯ 55 ಕಿ.ಮೀ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಚಾಮ್ಲಿಯಾಲ್ ದೇಗುಲಗಳಂತಹ, 300 ವರ್ಷಗಳಷ್ಟು ಹಳೆಯದಾದ ಚಾಮು ಚಾಕ್, ಬಾಬಾ ಬಲಿ ಕರಣ್ ಮತ್ತು ಬಾಬಾ ಸಿದ್ ಗೋರಿಯಾ ದೇವಾಲಯಗಳಂತಹ ಪ್ರವಾಸಿ ಆಕರ್ಷಣೆಯ ಸ್ಥಳಗಳು ಸಾಕಷ್ಟಿವೆ. ಕೇಂದ್ರ ಹಾಗೂ ಜಮ್ಮು ಮತ್ತು ಕಾಶ್ಮೀರ ಆಡಳಿತ ಎರಡೂ ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸುವತ್ತ ಕಾರ್ಯ ನಿರ್ವಹಿಸುತ್ತಿವೆ. ಕಳೆದ ವರ್ಷ ಚಾಮ್ಲಿಯಾಲ್ ದೇಗುಲಕ್ಕೆ ಪ್ರವಾಸಿಗರು ಭೇಟಿ ನಿಡಿದ್ದ ಸಂದರ್ಭದಲ್ಲಿ ವಸತಿ ಸಮಸ್ಯೆಯನ್ನು ಎದುರಿಸಿದ್ದರು. ಈ ಸಮಸ್ಯೆಯನ್ನು ನಿವಾರಿಸಲು ನಾವು ಹೋಮ್ ಸ್ಟೇಗಳನ್ನು ಉತ್ತೇಜಿಸುತ್ತಿದ್ದೇವೆ." ಎಂದು ಹೇಳಿದರು.
ಗಡಿ ನಿವಾಸಿಗಳಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ವಿಶೇಷವಾಗಿ ಯುವ ಉದ್ಯಮಿಗಳು ತಮ್ಮ ಮನೆಗಳನ್ನು ಹೋಮ್ ಸ್ಟೇಗಳಾಗಿ ಪರಿವರ್ತಿಸಲು ಸಿದ್ಧರಾಗಿದ್ದಾರೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಮಿತಿ, ಕೇಂದ್ರೀಯ ವಿಶ್ವವಿದ್ಯಾಲಯವು, 40 ಗುರುತಿಸಲಾದ ಹೋಮ್ ಸ್ಟೇ ಮಾಲೀಕರಿಗೆ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಮಾರ್ಗದರ್ಶನ ನೀಡಲು ಎಂಒಯುಗೆ ಸಹಿ ಹಾಕಿದೆ.
"ಪ್ರವಾಸೋದ್ಯಮ ಅಭಿವೃದ್ಧಿಗೆ ಬಿಎಸ್ಎಫ್ ಆಡಳಿತದೊಂದಿಗೆ ಸಮನ್ವಯ ಮಾಡಿಕೊಳ್ಳಲಾಗಿದೆ. ಪ್ರವಾಸಿಗರು ಶೂನ್ಯರೇಖೆಯ ಉದ್ದ್ಕೂ ಕೃಷಿಯನ್ನು ವೀಕ್ಷಿಸಬಹುದು. ಗಡಿಭಾಗದ ನಿವಾಸಿಗಳ ರಕ್ಷಣೆಗಾಗಿ ನಿರ್ಮಿಸಿರುವ ಬಂಕರ್ಗಳು ಸರಿಯಾಗಿ ಬಳಕೆಯಾಗದೇ ಇರುವುದನ್ನು ನಾವು ಗಮನಿಸಿದ್ದೇವೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅಭಿಯಾನ ಆರಂಭಿಸಿದ್ದೇವೆ" ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸ್ಥಳಿಯಾ ನಿವಾಸಿ ಓ.ಪ್ರಕಾಶ್ ಮಾತನಾಡಿ, "ಮೊದಲು ಗಡಿಯಾಚೆ ಶೆಲ್ ದಾಳಿ ವಾಡಿಕೆಯಾಗಿತ್ತು. ಆದರೆ ಈ ಗಡಿಯಲ್ಲಿ ಶಾಂತಿ ನೆಲೆಸಿದೆ. ಮತ್ತು ಇಲ್ಲಿನ ಗ್ರಾಮೀಣ ಜನರಿಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಗಡಿಯಲ್ಲಿ ಶಾಂತಿ ನೆಲೆಸಲು ಕಾರಣರಾಗಿರುವ ಪ್ರಧಾನಿ ಮೋದಿ ಧನ್ಯವಾದಗಳು" ಎಂದು ಶ್ಲಾಘಿಸಿದರು.
ಇದನ್ನೂ ಓದಿ: ಸಾಂಬಾ ಜಿಲ್ಲೆಯ ಗಡಿ ಪ್ರದೇಶದ ಬಳಿ ಸುರಂಗ ಪತ್ತೆ ಹಚ್ಚಿದ ಭದ್ರತಾ ಪಡೆ: ಹೆಚ್ಚಿದ ಶೋಧ ಕಾರ್ಯಾಚರಣೆ