ಬೆಮೆತಾರಾ (ಛತ್ತೀಸ್‌ಗಢ): ಬೆಮೆತಾರಾದ ಬೆರ್ಲಾ ಬ್ಲಾಕ್‌ನಲ್ಲಿರುವ ಗನ್‌ಪೌಡರ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಹಲವು ಗ್ರಾಮಗಳ ಜನರು ಕಾರ್ಖಾನೆಯ ಹೊರಗೆ ಆಗಮಿಸಿದ್ದಾರೆ. ಈ ಸ್ಫೋಟದಲ್ಲಿ 15ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ ಇದೆ. ಆದರೆ ಅಧಿಕೃತವಾಗಿ ಇದು ದೃಢಪಟ್ಟಿಲ್ಲ. ಬೆಮೆತಾರಾ ಜಿಲ್ಲಾಧಿಕಾರಿ ರಣಬೀರ್ ಶರ್ಮಾ, ರೈತ ಮುಖಂಡ ಯೋಗೇಶ್ ತಿವಾರಿ, ಜಿಲ್ಲಾ ಪಂಚಾಯತ್ ಸದಸ್ಯ ರಾಹುಲ್ ತಿಕ್ರಿಹಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸ್ಫೋಟದ ನಂತರ ನಡುಗಿದ ಮನೆಗಳು: ಇದು ಬೋರ್ಸಿ ಗ್ರಾಮದಲ್ಲಿ ಇರುವ ಗನ್‌ಪೌಡರ್ ಕಾರ್ಖಾನೆಯ ಸ್ಫೋಟ ಪ್ರಕರಣ. ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಗನ್‌ಪೌಡರ್ ಕಾರ್ಖಾನೆಯಲ್ಲಿನ ಸ್ಫೋಟವು ಎಷ್ಟು ಶಕ್ತಿಯುತವಾಗಿತ್ತು ಎಂದರೆ, ಸ್ಫೋಟದ ನಂತರ ಗ್ರಾಮದ ಅನೇಕ ಮನೆಗಳು ನಡುಗಿದ್ದಾವೆ. ಇದರಿಂದ ಜನರು ಮನೆಯಿಂದ ಹೊರ ಬಂದಿದ್ದಾರೆ. ಸುತ್ತಲೂ ಹೊಗೆ ಹರಡಿದ್ದರಿಂದ ಗನ್ ಪೌಡರ್ ಕಾರ್ಖಾನೆಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಸಹಾಯ ಮಾಡುವುದಾಗಿ ಹೇಳಿದ ಟ್ರಾಫಿಕ್ ಡಿಎಸ್ಪಿ: ಈ ಘಟನೆಯ ನಂತರ, ರಾಯ್‌ಪುರ ಟ್ರಾಫಿಕ್ ಡಿಎಸ್ಪಿ ಗುರ್ಜಿತ್ ಸಿಂಗ್ ಈಟಿವಿ ಭಾರತ್‌ನೊಂದಿಗೆ ವಿಶೇಷ ಸಂವಾದದಲ್ಲಿ ಮಾತನಾಡಿ, ಗಾಯಾಳುಗಳನ್ನು ಬೆಮೆತಾರಾದಿಂದ ರಾಯ್‌ಪುರಕ್ಕೆ ಕರೆತರಲು ರಸ್ತೆ ಸಂಚಾರ ಮುಕ್ತಗೊಳಿಸಲಾಗುವುದು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರುವಲ್ಲಿ ಯಾವುದೇ ತೊಂದರೆಯಾಗಬಾರದು, 6 ಗಾಯಾಳುಗಳನ್ನು ರಾಯಪುರಕ್ಕೆ ಕಳುಹಿಸಲಾಗಿದೆ. 1 ಗಾಯಾಳು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.
ಅದೊಂದು ಗನ್ ಪೌಡರ್ ತಯಾರಿಕಾ ಕಂಪನಿ. ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ಮಾತುಕತೆ ನಡೆಯುತ್ತಿದೆ. ಇಡೀ ಆಡಳಿತ ಘಟನಾ ಸ್ಥಳಕ್ಕೆ ತಲುಪಿದೆ. ತನಿಖೆಯ ನಂತರ ಮೃತರ ಗುರುತು ತಿಳಿಯಲಿದೆ. -ವಿಜಯ್ ಶರ್ಮಾ, ಉಪ ಮುಖ್ಯಮಂತ್ರಿ..
ಸ್ಫೋಟಕ್ಕೆ ಕಾರಣ ನಿಗೂಢ: ಗನ್‌ಪೌಡರ್ ಕಾರ್ಖಾನೆಯಲ್ಲಿ ಸ್ಫೋಟಗೊಂಡಿದ್ದರಿಂದ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಕೂಡ ಬಂದಿವೆ. ಸ್ಫೋಟಕ್ಕೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಬ್ಲಾಸ್ಟಿಂಗ್ ಎಷ್ಟು ತೀವ್ರವಾಗಿತ್ತು ಎಂದರೆ ನೂರಾರು ಅಡಿ ಎತ್ತರದ ವಿದ್ಯುತ್ ತಂತಿಗಳು ಸಹ ಸ್ಫೋಟದಿಂದ ಡ್ಯಾಮೇಜ್ ಆಗಿವೆ.
ಸ್ಫೋಟದ ನಂತರ ಜನರ ಆಕ್ರೋಶ: ಸ್ಫೋಟದ ನಂತರ, ಕಾರ್ಖಾನೆಯ ಹೊರಗೆ ಸಾವಿರಾರು ಜನರು ಜಮಾಯಿಸಿದ್ದಾರೆ. ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸಿಟ್ಟಿಗೆದ್ದ ಜನರು ಕಾರ್ಖಾನೆ ಕಚೇರಿಯನ್ನು ಧ್ವಂಸಗೊಳಿಸಿದರು. ಸ್ಫೋಟದ ನಂತರ ಅನೇಕ ಜನರು ಅವಶೇಷಗಳ ಅಡಿಯಲ್ಲಿ ಹೂತುಹೋಗಿರುವ ಭಯವಿದೆ. ಸ್ಫೋಟದ ರಭಸಕ್ಕೆ ವಿದ್ಯುತ್ ಕಂಬವೂ ಬಿದ್ದಿದೆ.
ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯ: ಬೆಮೆತಾರಾದ ಬೆರ್ಲಾದಲ್ಲಿರುವ ಗನ್‌ಪೌಡರ್ ಕಾರ್ಖಾನೆಯಲ್ಲಿ ಸ್ಫೋಟದ ಘಟನೆಯ ನಂತರ ಅಗ್ನಿಶಾಮಕ ದಳ ಮತ್ತು ಎಸ್‌ಡಿಆರ್‌ಎಫ್ ರಕ್ಷಣಾ ತಂಡವು ರಾಯ್‌ಪುರ ಮತ್ತು ದುರ್ಗದಿಂದ ಕರೆತರಸಲಾಯಿತು. ಎಸ್‌ಡಿಆರ್‌ಎಫ್‌ನ 20 ಸದಸ್ಯರ ರಕ್ಷಣಾ ತಂಡವು ರಾಯ್‌ಪುರದಿಂದ ಸ್ಥಳಕ್ಕೆ ತಲುಪಿದ್ದು, ಕೂಡಲೇ ರಕ್ಷಣಾ ಕಾರ್ಯ ಕೈಗೊಂಡಿತು. ಸ್ಫೋಟದ ನಂತರವೂ ಅನಿಲ ಸೋರಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.