ನವದೆಹಲಿ: ನಾನು ಬಿಜೆಪಿ ಸೇರಬೇಕು ಎಂದು ಅಲ್ಲಿನ ನಾಯಕರು ಬಯಸುತ್ತಿದ್ದಾರೆ. ಆದರೆ, ನಾನು ಅವರ ಒತ್ತಡಕ್ಕೆ ಎಂದಿಗೂ ಮಣಿಯುವುದಿಲ್ಲ. ನನ್ನ ಮೇಲೆ ಎಷ್ಟೇ ಆರೋಪ ಮಾಡಿದರೂ ಬಿಜೆಪಿಗೆ ತಲೆಬಾಗುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗುಡುಗಿದ್ದಾರೆ.
ಆಮ್ ಆದ್ಮಿ ಪಕ್ಷದ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ. ಕೋಟ್ಯಂತರ ರೂಪಾಯಿ ಹಣದ ಆಮಿಷವೊಡ್ಡಿದೆ ಎಂದು ಆರೋಪಿಸಿದ್ದ ದೆಹಲಿ ಸಿಎಂ, ಈಗ ತಮಗೂ ಕೂಡ ಬಿಜೆಪಿ ಸೇರುವಂತೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿದ್ದಾರೆ. ಇದನ್ನೆಲ್ಲಾ ಎದುರಿಸುವೆ. ನನ್ನನ್ನು ಬಂಧಿಸಿ ಜೈಲಿಗೆ ಹಾಕಿದರೂ, ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿವೆ ಎಂದು ಅವರು ಹೇಳಿದರು.
ಇಲ್ಲಿನ ಶಾಲಾ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಪ್ ಸರ್ಕಾರದಿಂದ ದೆಹಲಿಯಲ್ಲಿ ನಡೆಯುತ್ತಿರುವ ಶಾಲೆಗಳ ನಿರ್ಮಾಣ ಮತ್ತು ಜನರಿಗೆ ಉಚಿತ ಯೋಜನೆಗಳಂತಹ ಯಾವುದೇ ಕಾರ್ಯಕ್ರಮಗಳು ನಾನು ಜೈಲಿಗೆ ಹೋದರೂ ನಿಲ್ಲುವುದಿಲ್ಲ. ಮಾಜಿ ಸಚಿವರಾದ ಮನೀಶ್ ಸಿಸೋಡಿಯಾ ಶಾಲೆಗಳನ್ನು ನಿರ್ಮಿಸಿದ ಕಾರಣಕ್ಕಾಗಿ ಜೈಲುಪಾಲಾದರು. ಸತ್ಯೇಂದ್ರ ಜೈನ್ ಮೊಹಲ್ಲಾ ಕ್ಲಿನಿಕ್‌ಗಳನ್ನು ನಿರ್ಮಿಸಿದ್ದರಿಂದ ಶಿಕ್ಷೆಗೆ ಗುರಿಯಾದರು. ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಗಳನ್ನು ನಮ್ಮ ಮೇಲೆ ಕೇಂದ್ರ ಸರ್ಕಾರ ಗುರಾಣಿಯನ್ನಾಗಿ ಬಳಸುತ್ತಿದೆ ಎಂದು ಆರೋಪಿಸಿದರು.
ಆಪ್ ಸಚಿವೆ ಅತಿಶಿಗೆ ನೋಟಿಸ್: ಆಪ್ ಶಾಸಕರನ್ನು ಬಿಜೆಪಿ ಖರೀದಿಗೆ ಮುಂದಾಗಿದೆ ಎಂದು ಆರೋಪಿಸಿದ್ದ ದೆಹಲಿ ಸಚಿವೆ ಅತಿಶಿ ಅವರಿಗೆ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ. ಬಿಜೆಪಿ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಮಾಹಿತಿ ನೀಡುವಂತೆ ಅದರಲ್ಲಿ ಸೂಚಿಸಲಾಗಿದೆ. ಇಂದು ಮಧ್ಯಾಹ್ನ 12.55ಕ್ಕೆ ಸಚಿವೆಯ ನಿವಾಸಕ್ಕೆ ತೆರಳಿದ ಪೊಲೀಸರು ನೋಟಿಸ್ ನೀಡಿ ಬಂದಿದ್ದಾರೆ.
ನೋಟಿಸ್ ನೀಡಿದ ವೇಳೆ ಸಚಿವೆ ಅತಿಶಿ ಅವರು ಮನೆಯಲ್ಲಿ ಇರಲಿಲ್ಲ. ಶನಿವಾರವೂ ಅವರ ನಿವಾಸಕ್ಕೆ ಅಧಿಕಾರಿಗಳು ತೆರಳಿದಾಗಲೂ ಹಾಜರಿರದ ಕಾರಣ, ವಾಪಸ್ ಬಂದಿದ್ದರು. ಇಂದು ಮತ್ತೆ ತೆರಳಿದರೂ ಸಚಿವೆ ಸಿಗಲಿಲ್ಲ. ಆದರೆ, ತಮ್ಮ ಕಚೇರಿ ಸಿಬ್ಬಂದಿಗೆ ನೋಟಿಸ್ ಪಡೆಯಲು ಸೂಚಿಸಿದ್ದರಿಂದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಫೆಬ್ರವರಿ 5 ರೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಇದಕ್ಕೂ ಮೊದಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ನೋಟಿಸ್ ನೀಡಲಾಗಿದೆ. ಕೇಜ್ರಿವಾಲ್ ಮತ್ತು ಸಚಿವೆ ಅತಿಶಿ ಅವರು, ಬಿಜೆಪಿಯು ಆಪ್ ಶಾಸಕರ ಖರೀದಿಗೆ ತಲಾ 25 ಕೋಟಿ ರೂಪಾಯಿ ಆಫರ್ ಮಾಡಿದೆ. ಇದರ ಸಾಕ್ಷ್ಯಾಧಾರಗಳು ನಮ್ಮಲ್ಲಿವೆ ಎಂದು ಆರೋಪ ಮಾಡಿದ್ದರು.
ಇದನ್ನೂ ಓದಿ: ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ದೂರು ನೀಡಿದ ಇಡಿ