ನವದೆಹಲಿ: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಮತ್ತಷ್ಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗುಜರಾತ್ ಮತ್ತು ಕಾಂಗ್ರೆಸ್ ತೊರೆದು ನಿನ್ನೆಯಷ್ಟೇ ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರಿಗೆ ಮಹಾರಾಷ್ಟ್ರದಿಂದ ಟಿಕೆಟ್ ಘೋಷಿಸಲಾಗಿದೆ.
ರಾಜ್ಯಸಭಾ ಚುನಾವಣೆಗೆ ಬಿಜೆಪಿ ಗುಜರಾತ್‌ನಿಂದ ನಾಲ್ವರು ಮತ್ತು ಮಹಾರಾಷ್ಟ್ರದಿಂದ ಮೂವರು ಸೇರಿ ಒಟ್ಟು 7 ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಪ್ರಸ್ತುತ ನಡ್ಡಾ ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೆ, ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಈ ರಾಜ್ಯದಿಂದ ಏಕೈಕ ಸ್ಥಾನವನ್ನು ಗೆಲ್ಲಲು ಅಗತ್ಯವಾದ ಸಂಖ್ಯಾಬಲವನ್ನು ಬಿಜೆಪಿ ಹೊಂದಿಲ್ಲ.
ಇದನ್ನೂ ಓದಿ: ಮಾಜಿ ಪಿಎಂ ಮನಮೋಹನ್ ಸಿಂಗ್ ಬದಲಿಗೆ ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ನಾಮಪತ್ರ
ಕೇಂದ್ರ ಸಚಿವರಾದ ಮನ್ಸುಖ್ ಮಾಂಡವಿಯಾ ಮತ್ತು ಪರ್ಷೋತ್ತಮ್ ರೂಪಾಲಾ ಗುಜರಾತ್‌ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಮತ್ತೊಬ್ಬ ಕೇಂದ್ರ ಸಚಿವ ನಾರಾಯಣ ರಾಣೆ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಮೂವರಿಗೂ ಈ ಬಾರಿ ಟಿಕೆಟ್ ಘೋಷಣೆ ಮಾಡಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇವರು ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇವರ ಬದಲಿಗೆ ಗುಜರಾತ್‌ನಿಂದ ಗೋವಿಂದ್ಭಾಯ್ ಧೋಲಾಕಿಯ, ಮಯಾಂಕ್ಭಾಯ್ ನಾಯಕ್, ಡಾ.ಜಯಶ್ವಂತ್ ಸಿನ್ಹಾ ಹಾಗೂ ಮಹಾರಾಷ್ಟ್ರದಿಂದ ಮೇಧಾ ಕುಲಕರ್ಣಿ, ಡಾ.ಅಜೀತ್ ಗೋಪಾಚ್ಚಾಡೆ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಲಾಗಿದೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ ಮಧ್ಯಪ್ರದೇಶದಿಂದ ಡಾ.ಎಲ್.ಮುರುಗನ್, ಉಮೇಶ್ನಾಥ್ ಮಹಾರಾಜ್, ಮಯಾ ನರೋಲಿಯಾ ಮತ್ತು ಬನ್ಸಿಲಾಲ್ ಗುರ್ಜರ್ ಹಾಗೂ ಒಡಿಶಾದಿಂದ ಅಶ್ವಿನಿ ವೈಷ್ಣವ್ ಅವರಿಗೆ ಟಿಕೆಟ್ ಪ್ರಕಟಿಸಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮಗ ವಿಭಕರ್ ಶಾಸ್ತ್ರಿ