ಪಾಟ್ನಾ(ಬಿಹಾರ): ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹೊಸ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ಇವರು ಮೀನು ಫ್ರೈ ತಿನ್ನುತ್ತಿರುವ ವಿಡಿಯೋವೊಂದು ಚೈತ್ರ ನವರಾತ್ರಿ ದಿನವಾದ ಮಂಗಳವಾರ ವೈರಲ್ ಆಗಿದೆ. ಬಿಜೆಪಿ ನಾಯಕರು ಹಾಗೂ ನೆಟ್ಟಿಜನ್ಗಳು ಯುವ ರಾಜಕಾರಣಿಯನ್ನು ಟ್ರೋಲ್ ಮಾಡಿದ್ದಾರೆ.
ಗಮನಾರ್ಹ ವಿಷಯವೆಂದರೆ, ಮೀನು ಫ್ರೈ ತಿನ್ನುತ್ತಿರುವ ವಿಡಿಯೋವನ್ನು ತೇಜಸ್ವಿ ಯಾದವ್ ಅವರೇ ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ. ಇದು ಟೀಕೆ, ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಮೀನು ಸವಿದಿರುವ ಬಗ್ಗೆ ಉಲ್ಟಾ ಹೊಡೆದಿದ್ದಾರೆ. ಹಬ್ಬಕ್ಕಿಂತ ಮುಂಚೆಯೇ ಈ ವಿಡಿಯೋ ಚಿತ್ರೀಕರಿಸಲಾಗಿದೆ. ವಿರೋಧಿಗಳು ತಮ್ಮ ಕಡಿಮೆ ಬುದ್ಧಿಮಟ್ಟ (ಐಕ್ಯೂ) ಬಹಿರಂಗಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರ್ಜೆಡಿ ನಾಯಕ ಟೀಕಿಸಿದ್ದಾರೆ.
ಮಂಗಳವಾರ ಈ ವಿಡಿಯೋ ಹಂಚಿಕೊಂಡಿರುವ ತೇಜಸ್ವಿ ಯಾದವ್, ''ಚುನಾವಣಾ ಓಡಾಟದಲ್ಲಿ ಹೆಲಿಕಾಪ್ಟರ್ನಲ್ಲಿ ಊಟ! ದಿನಾಂಕ 08/04/2024'' ಎಂದು ಪೋಸ್ಟ್ ಮಾಡಿದ್ದಾರೆ. ಇವರೊಂದಿಗೆ ಮಾಜಿ ಸಚಿವ, ವಿಕಾಸ್ಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹ್ನಿ ಇದ್ದರು. ಆದರೆ, ಚೈತ್ರ ನವರಾತ್ರಿ ದಿನದಂದು ಈ ವಿಡಿಯೋವನ್ನು ಹರಿಬಿಟ್ಟ ಬೆನ್ನಲ್ಲೇ ತೇಜಸ್ವಿ ಟ್ರೋಲ್ಗೆ ಗುರಿಯಾಗಿದ್ದಾರೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಂತಹ ಹಿರಿಯ ಬಿಜೆಪಿ ನಾಯಕರೂ ಸಹ ಟೀಕಾಪ್ರಹಾರ ನಡೆಸಿದ್ದಾರೆ.
ತೇಜಸ್ವಿ ಯಾದವ್ ಅವರನ್ನು 'ರುತುಮಾನದ ಸನಾತನಿ'. ಅವರು ತುಷ್ಟೀಕರಣದ ರಾಜಕೀಯವನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಗಿರಿರಾಜ್ ಟೀಕಿಸಿದ್ದಾರೆ. ಅಲ್ಲದೇ, ತಂದೆ ಲಾಲು ಪ್ರಸಾದ್ ಬಿಹಾರದಲ್ಲಿ ತಮ್ಮ ಪಕ್ಷವು ಅಧಿಕಾರದಲ್ಲಿದ್ದಾಗ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶದ ವಲಸಿಗರಿಗೆ ಅನುಮತಿ ನೀಡಿದ್ದರು ಎಂದು ಆರೋಪಿಸಿದ್ದಾರೆ. ಬಿಹಾರದ ಉಪ ಮುಖ್ಯಮಂತ್ರಿಯೂ ಆಗಿರುವ ಮತ್ತೊಬ್ಬ ಬಿಜೆಪಿ ನಾಯಕ ವಿಜಯ್ ಕುಮಾರ್ ಸಿನ್ಹಾ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರಾವಣ ಮಾಸದಲ್ಲೇ ಕುರಿ ಮರಿ ಔತಣವನ್ನು ಲಾಲು ಪ್ರಸಾದ್ ಕುಟುಂಬ ಮಾಡಿತ್ತು ಎಂದು ಕಿಡಿಕಾರಿದ್ದಾರೆ.
ಮತ್ತೊಂದೆಡೆ, ತೇಜಸ್ವಿ ಯಾದವ್ ವಿವಾದವನ್ನು ಲಘುವಾಗಿ ಪರಿಗಣಿಸಿದ್ದು, 'ಎಕ್ಸ್'ನಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಒಂಬತ್ತು ದಿನಗಳ ಕಠಿಣ ವೃತ್ರಗಳ ಪ್ರಾರಂಭವಾಗುವ ಒಂದು ದಿನ ಮೊದಲು ಎಂದರೆ, ಏಪ್ರಿಲ್ 8ರಂದು ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಮೊದಲ ಪೋಸ್ಟ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ನಾವು ಬಿಜೆಪಿ ಬೆಂಬಲಿಗರು ಮತ್ತು 'ಗೋದಿ ಮಾಧ್ಯಮಗಳು' ಮತ್ತು ಭಕ್ತರ ಕಡಿಮೆ ಐಕ್ಯೂ ಅನ್ನು ಬಹಿರಂಗಪಡಿಸಲು ಇಚ್ಛಿಸಿದ್ದೆವು. ಅವರು ಅದನ್ನು ಸಾಬೀತುಪಡಿಸಿದ್ದಾರೆ ಎಂದು ತೇಜಸ್ವಿ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: 'ನ್ಯಾಯಾಲಯ ಕುರುಡಲ್ಲ': ರಾಮದೇವ್ ಬಾಬಾಗೆ ಶಾಕ್ ನೀಡಿದ ಸುಪ್ರೀಂ ಕೋರ್ಟ್ - Ramdev Baba Misleading Ads Case