ಹೈದರಾಬಾದ್: ಜಾರ್ಖಂಡ್ ರಾಜಕೀಯ ಹೈಡ್ರಾಮಾ ಮುಗಿದಿದ್ದು, ಇದೀಗ ಬಿಹಾರ ರಾಜಕೀಯದ ಬಿಕ್ಕಟ್ಟು ಮುನ್ನೆಲೆಗೆ ಬಂದಿದೆ. ಆರ್ಜೆಡಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಬಿಜೆಪಿ ಜೊತೆಗೆ ಸರ್ಕಾರ ರಚಿಸಿರುವ ಸಿಎಂ ನಿತೀಶ್ಕುಮಾರ್ ಫೆಬ್ರವರಿ 12 ರಂದು ವಿಶ್ವಾಸಮತ ಪರೀಕ್ಷೆಗೆ ಒಳಗಾಗಲಿದ್ದು, ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ತೆಲಂಗಾಣಕ್ಕೆ ಕರೆತಂದಿದೆ. ಸದ್ಯ ಅವರನ್ನು ಇಲ್ಲಿಂದ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ರೆಸಾರ್ಟ್‌ಗೆ ಮಂಗಳವಾರ ಸ್ಥಳಾಂತರಿಸಲಾಗಿದೆ.
ಬಿಹಾರ ವಿಧಾನಸಭೆಯಲ್ಲಿ ಮಹತ್ವದ ವಿಶ್ವಾಸ ಮತಯಾಚನೆಗೂ ಮುನ್ನ 19 ಕಾಂಗ್ರೆಸ್ ಶಾಸಕರನ್ನು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಕಾಗಜ್ ಘಾಟ್ ಸಿರಿ ನೇಚರ್ ವ್ಯಾಲಿಗೆ ಕರೆತರಲಾಗಿದೆ. ಈಗ ಅಲ್ಲಿಂದ ಎಲ್ಲ ಶಾಸಕರನ್ನು ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ರೆಸಾರ್ಟ್‌ಗೆ ಮಂಗಳವಾರ ಸ್ಥಳಾಂತರಿಸಲಾಗಿದೆ. ಫೆಬ್ರವರಿ 11ರ ವರೆಗೆ ಅಲ್ಲಿಯೇ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
7 ವಾಹನಗಳಲ್ಲಿ ಶ್ರೀಶೈಲಕ್ಕೆ ಬರುತ್ತಿರುವ ಶಾಸಕರೆಲ್ಲರೂ ಇಂದು ಇಲ್ಲಿನ ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅಚ್ಚಂಪೇಟೆಯ ಕಾಂಗ್ರೆಸ್ ಶಾಸಕ ವಂಶಿಕೃಷ್ಣ ಅವರು ಬಿಹಾರದ ಶಾಸಕರಿಗೆ ದೇವರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡುತ್ತಿದ್ದಾರೆ. ಫೆಬ್ರವರಿ 4 ರಂದು 17 ಜನ ಬಿಹಾರದ ಶಾಸಕರು ಮೊದಲ ಹಂತದಲ್ಲಿ ಹೈದರಾಬಾದ್ಗೆ ಬಂದಿದ್ದರು. ಬಳಿಕ ಇನ್ನಿಬ್ಬರು ಫೆಬ್ರವರಿ 5 ರಂದು ಬಂದು ಸೇರಿಕೊಂಡಿದ್ದರು.
ಹೈದರಾಬಾದ್ನಿಂದ 30 ಕಿ.ಮೀ ದೂರದಲ್ಲಿರುವ ರೆಸಾರ್ಟ್‌ನಲ್ಲಿ ಎಲ್ಲರಿಗೂ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅದನ್ನೂ ಬದಲಿಸಿ ಶ್ರೀಶೈಲಕ್ಕೆ ಕರೆದೊಯ್ಯಲಾಗುತ್ತಿದೆ. ಯಾವ ಕಾರಣಕ್ಕಾಗಿ ಅವರನ್ನು ಸ್ಥಳಾಂತರಿಸಲಾಗುತ್ತಿದೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ಶ್ರೀಶೈಲಕ್ಕೆ ಕರೆದೊಯ್ಯಲಾಗುತ್ತಿದೆ.
ನಿತೀಶ್ಗೆ ವಿಶ್ವಾಸಮತ ಪರೀಕ್ಷೆ: ಫೆಬ್ರವರಿ 12 ರಂದು ಸಿಎಂ ನಿತೀಶ್ಕುಮಾರ್ ಅವರು ವಿಶ್ವಾಸಮತ ಪರೀಕ್ಷೆ ಸಾಬೀತು ಮಾಡಬೇಕಿದೆ. ಆರ್ಜೆಡಿ, ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಬಿಜೆಪಿ ಜೊತೆಗೆ ನೂತನ ಸರ್ಕಾರ ರಚಿಸಿಕೊಂಡಿದ್ದಾರೆ. ವಿಪಕ್ಷಗಳ ಇಂಡಿಯಾ ಕೂಟದಿಂದ ಹೊರಬಂದು ಎನ್ಡಿಎ ಸೇರಿರುವ ನಿತೀಶ್ಕುಮಾರ್ 9ನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದು, ಬಹುಮತ ಸಾಬೀತುಪಡಿಸುವ ಸವಾಲಿದೆ.
ವಿಪಕ್ಷಗಳ INDI ಕೂಟದಲ್ಲಿ ನಿರೀಕ್ಷಿತ ರೀತಿಯಲ್ಲಿ ಪ್ರಗತಿ ಆಗುತ್ತಿಲ್ಲ. ಜೊತೆಗೆ ರಾಜ್ಯದಲ್ಲಿ ಆರ್ಜೆಡಿ ಜೊತೆಗಿನ ಮೈತ್ರಿಯನ್ನೂ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗದೇ ಕೂಟದಿಂದ ಹೊರಬರುತ್ತಿದ್ದೇನೆ. ಬಿಜೆಪಿ ಜೊತೆಗೆ ಸೇರಿ ಎನ್ಡಿಎ ಮೈತ್ರಿಕೂಟದಲ್ಲಿ ಮುಂದುವರಿಯಲಾಗುವುದು ಎಂದು ನಿತೀಶ್ಕುಮಾರ್ ಹೇಳಿದ್ದರು.
ಪಕ್ಷಗಳ ಬಲಾಬಲ ಹೀಗಿದೆ
ವಿಧಾನಸಭೆ ಒಟ್ಟು ಸ್ಥಾನ | 243 |
ಆರ್ಜೆಡಿ | 79 |
ಬಿಜೆಪಿ | 78 |
ಜೆಡಿಯು | 45 |
ಕಾಂಗ್ರೆಸ್ | 19 |
ಎಡಪಕ್ಷಗಳು (ಸಿಪಿಐ-ಎಂಎಲ್, ಸಿಪಿಐ,ಸಿಪಿಐಎಂ) | 16 |
ಎಚ್ಎಎಂ | 4 |
ಇತರೆ | 2 |
ಇದನ್ನೂ ಓದಿ: 9ನೇ ಬಾರಿಗೆ ಸಿಎಂ ಆಗಿ ನಿತೀಶ್ಕುಮಾರ್ ಪ್ರಮಾಣ; ಬಿಜೆಪಿಯ ಇಬ್ಬರಿಗೆ ಡಿಸಿಎಂ ಸ್ಥಾನ