ಬೆತುಲ್ (ಮಧ್ಯಪ್ರದೇಶ) : ಯಾವುದೋ ಕಾರಣಕ್ಕಾಗಿ ಆದಿವಾಸಿ ಯುವಕನ ಮೇಲೆ ಗುಂಪೊಂದು ದಾರುಣವಾಗಿ ಹಲ್ಲೆ ನಡೆಸಿದೆ. ವಿವಸ್ತ್ರಗೊಳಿಸಿ, ತಲೆಕೆಳಗೆ ನೇತು ಹಾಕಿ ಮನಬಂದಂತೆ ಹಲ್ಲೆ ಮಾಡಲಾಗಿದೆ. ಘಟನೆ ಮೂರು ತಿಂಗಳ ಹಿಂದೆ ನಡೆದಿದೆ ಎಂದು ಹೇಳಲಾಗಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಧ್ಯಪ್ರದೇಶದ ಬೆತುಲ್ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಗುಂಪೊಂದು, ಬುಡಕಟ್ಟು ಸಮುದಾಯದ ಯುವಕನನ್ನು ಬೆತ್ತಲೆಗೊಳಿಸಿ, ತಲೆಕೆಳಗೆ ನೇತುಹಾಕಿದೆ. ಬಳಿಕ ನಿಂದಿಸುತ್ತಾ ಬೆಲ್ಟ್ ಮತ್ತು ದೊಣ್ಣೆಗಳಿಂದ ಹೊಡೆಯಲಾಗಿದೆ. ಆರೋಪಿಗಳೇ ಮಾಡಿರುವ ವಿಡಿಯೋದಲ್ಲಿ ಕ್ರೂರತ್ವವನ್ನು ಕಾಣಬಹುದು. ಘಟನೆ ನಡೆದು ಮೂರು ತಿಂಗಳ ನಂತರ ಯುವಕ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾನೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಕಳೆದ ವರ್ಷದ ನವೆಂಬರ್ 15 ರಂದು ಸಂತ್ರಸ್ತ ರಿಂಕೇಶ್ ಚೌಹಾಣ್ ಬೆತುಲ್‌ಗೆ ಬಂದಿದ್ದಾಗ, ಮನೆಯೊಂದರಲ್ಲಿದ್ದ 6-7 ಜನ ಕಿಡಿಗೇಡಿಗಳು ಯಾವುದೋ ಕಾರಣಕ್ಕಾಗಿ ಕಿತ್ತಾಡಿದ್ದಾರೆ. ಬಳಿಕ ರಿಂಕೇಶ್ನನ್ನು ಅದೇ ಮನೆಯಲ್ಲಿ ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಗಿದೆ. ಬಳಿಕ ಉಲ್ಟಾ ನೇತು ಹಾಕಿ ಬಡಿಗೆಗಳಿಂದ ಹೊಡೆಯಲಾಗಿದೆ. ನೋವಿನಿಂದ ಯುವಕ ಕಿರುಚುತ್ತಿದ್ದರೂ ಆರೋಪಿಗಳು ಹೀನಾಯವಾಗಿ ನಡೆದುಕೊಂಡಿದ್ದಾರೆ.
ಹಲ್ಲೆ ಮಾಡಿದ ಬಳಿಕ ಯುವಕನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳು ಕ್ರೂರವಾಗಿ ನಡೆದುಕೊಂಡಿದ್ದರು, ಹೆದರಿದ ರಿಂಕೇಶ್ ಘಟನೆಯ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ಇದೀಗ ಆರೋಪಿಗಳು ಬಿಡುಗಡೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಕಂಡ ಸಮುದಾಯದವರು ಸಂತ್ರಸ್ತನಿಗೆ ಧೈರ್ಯ ಹೇಳಿ ದೂರು ನೀಡಲು ಸೂಚಿಸಿದ್ದಾರೆ. ಸಹೋದರನೊಂದಿಗೆ ಠಾಣೆಗೆ ಆಗಮಿಸಿ ರಿಂಕೇಶ್ ದೂರು ದಾಖಲಿಸಿದ್ದಾನೆ.
ಆರೋಪಿಗಳ ಶೀಘ್ರ ಬಂಧನ: ಆದಿವಾಸಿ ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ ತಲೆಕೆಳಗಾಗಿ ಬಿಗಿದು ಥಳಿಸಿರುವ ವಿಡಿಯೋ ಹೊರಬಿದ್ದಿದೆ. ಆರೋಪಿಗಳ ವಿರುದ್ಧ ಸಂತ್ರಸ್ತ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೋ ಮೂರು ತಿಂಗಳ ಹಳೆಯದು. ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಬೆತುಲ್ ಎಸ್ಪಿ ಸಿದ್ಧಾರ್ಥ್ ಚೌಧರಿ ಹೇಳಿದ್ದಾರೆ.
ಇದಕ್ಕೂ ಮೊದಲು ಇಂಥದ್ದೇ ಘಟನೆಯೊಂದು ನಡೆದಿತ್ತು. ಆದಿವಾಸಿ ಯುವಕನ ಮೇಲೆ ಗುಂಪೊಂದು ತೀವ್ರವಾಗಿ ಹಲ್ಲೆ ಮಾಡಿತ್ತು. ಇದು ದೊಡ್ಡ ಪ್ರಮಾಣದಲ್ಲಿ ವಿರೋಧಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಮಾಟಮಂತ್ರದ ಶಂಕೆ: ಎಲ್ಲರೂ ನೋಡು ನೋಡುತ್ತಿದ್ದಂತೆ ತಾಯಿ ಮಗನ ಬರ್ಬರ ಕೊಲೆ