ಬಹ್ರೈಚ್, ಉತ್ತರಪ್ರದೇಶ: ಜಿಲ್ಲೆಯ ಮಹ್ಸಿ ಪ್ರದೇಶದ ವಿವಿಧ ಗ್ರಾಮಗಳಲ್ಲಿ ತೋಳವೊಂದು ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ವರದಿಯಾಗಿದೆ. ಕಳೆದ 48 ಗಂಟೆಗಳಲ್ಲಿ ನಡೆದ ನಾಲ್ಕನೇ ದಾಳಿ ಇದಾಗಿದೆ. ತೋಳದ ದಾಳಿಗೆ ಒಳಗಾದ ಇಬ್ಬರೂ ಮಹಿಳೆಯರು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೋಳವು ನಿರಂತರವಾಗಿ ದಾಳಿ ಮಾಡುತ್ತಲೇ ಇದೆ. ಈಗಾಗಲೇ ಅಲ್ಲಿನ ಸ್ಥಳೀಯ ಆಡಳಿತ ಹಾಗೂ ಅರಣ್ಯ ಇಲಾಖೆ 5 ತೋಳಗಳನ್ನು ಹಿಡಿದಿವೆ. ಆದರೂ ಆರನೇ ತೋಳವು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. 48 ಗಂಟೆಗಳಲ್ಲಿ ನಾಲ್ಕು ಬಾರಿ ದಾಳಿ ನಡೆಸಿ 5 ಮಂದಿಯನ್ನು ಗಾಯಗೊಳಿಸಿದೆ ಎಂದು ಅಧಿಕಾರಿಗಳ ಮೂಲಗಳು ಮಾಹಿತಿ ನೀಡಿವೆ.
ಶುಕ್ರವಾರ ರಾತ್ರಿ, ಸಿಂಘಿಯಾ ನಾಸಿರ್‌ಪುರ ಗ್ರಾಮದ ನಿವಾಸಿ 27 ವರ್ಷದ ಗುಡಿಯಾ ತನ್ನ ಮಕ್ಕಳು ಮತ್ತು ಪತಿಯೊಂದಿಗೆ ತನ್ನ ಮನೆಯ ಅಂಗಳದಲ್ಲಿ ಮಲಗಿದ್ದರು. ಈ ವೇಳೆ ತೋಳ ಮನೆಯೊಳಗೆ ನುಗ್ಗಿದೆ. ಮಹಿಳೆ ಮೇಲೆ ಹಲ್ಲೆ ನಡೆಸಿದೆ. ಈ ದಾಳಿಯಲ್ಲಿ ಮಹಿಳೆ ಗಾಯಗೊಂಡಿದ್ದಾರೆ. ಮಹಿಳೆಯ ಕಿರುಚಾಟ ಕೇಳಿ ಕುಟುಂಬಸ್ಥರು ಎಚ್ಚರಗೊಂಡರು ಎಂದು ಗುಡಿಯಾ ತಿಳಿಸಿದ್ದಾರೆ. ಸೋದರ ಮಾವ ಸೇರಿದಂತೆ ಇತರರು ಮಹಿಳೆ ಕಿರುಚಾಟ ಕೇಳಿ ಹತ್ತಿರ ಬರುತ್ತಿದ್ದಂತೆ ತೋಳವು ಜೋಳದ ಗದ್ದೆಗೆ ಓಡಿಹೋಗಿದೆ. ಮಾಹಿತಿ ಪಡೆದ ಅರಣ್ಯ ಇಲಾಖೆ ರೇಂಜರ್ ಶಾಕಿಬ್ ಅನ್ಸಾರಿ ಕೂಡ ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬದವರು ಸೇರಿದಂತೆ ಗ್ರಾಮಸ್ಥರಿಂದ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ನಡುವೆ ಮಹಿಳೆಯನ್ನು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಮತ್ತೊಂದೆಡೆ, ಮಹಸಿಯ ಸಮ್ಮಾನ್‌ಪುರವಾ ಗ್ರಾಮದಲ್ಲಿಯೂ ಮಹಿಳೆಯ ಮೇಲೆ ತೋಳ ದಾಳಿ ಮಾಡಿದೆ. ಇಲ್ಲಿ 45 ವರ್ಷದ ಮುಕಿಮಾ ಎಂಬುವರು ಮನೆಯಲ್ಲಿ ಮಲಗಿದ್ದಾಗ ತೋಳ ದಾಳಿ ಮಾಡಿದೆ. ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರ ಸ್ಥಿತಿಯನ್ನು ಕಂಡ ವೈದ್ಯರು ಅವರನ್ನು ಬಹ್ರೈಚ್ ವೈದ್ಯಕೀಯ ಕಾಲೇಜಿಗೆ ಶಿಫಾರಸು ಮಾಡಿದ್ದಾರೆ. ತೋಳಗಳ ದಾಳಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಈ ವಿಚಾರದಲ್ಲಿ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ.
ಎರಡು ದಿನಗಳ ಹಿಂದೆ ಐದನೇ ನರಭಕ್ಷಕ ತೋಳ ಅರಣ್ಯ ಇಲಾಖೆಗೆ ಸಿಕ್ಕಿಬಿದ್ದಿತ್ತು. ಈ ಹಿಂದೆಯೂ 4 ತೋಳಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಲೆಗೆ ಬೀಳಿಸಿ ಸೆರೆ ಹಿಡಿದಿತ್ತು. ಇನ್ನೂ ಒಂದು ಉಗ್ರ ತೋಳ ಉಳಿದಿದೆ ಎಂದು ಹೇಳಲಾಗುತ್ತಿದೆ. ಬುಧವಾರ ರಾತ್ರಿಯೂ ಸಹ ಖೈರಿಘಾಟ್‌ನ ರಾಯ್‌ಪುರ ಕೊರಿಯನ್ ತಾಪ್ರಾ ಗ್ರಾಮದಲ್ಲಿ ತೋಳದಿಂದ 50 ವರ್ಷದ ಪುಷ್ಪಾ ದೇವಿ ಗಾಯಗೊಂಡಿದ್ದರು. ಮಂಗಳವಾರ ರಾತ್ರಿಯೂ ಸಹ ಮಹಸಿ ಪ್ರದೇಶದ ಗಡಾರಿಯನ್ ಪೂರ್ವ ಮೈಕುಪುರ್ವ ಗ್ರಾಮದಲ್ಲಿ 11 ವರ್ಷದ ಸುಮನ್ ಮತ್ತು ಭವಾನಿಪುರ ಗ್ರಾಮದಲ್ಲಿ 10 ವರ್ಷದ ಶಿವಾನಿ ಮೇಲೆ ತೋಳ ದಾಳಿ ನಡೆಸಿತ್ತು. ನರಭಕ್ಷಕ ತೋಳಗಳ ದಾಳಿಗೆ ಇಲ್ಲಿಯವರೆಗೆ 9 ಮಕ್ಕಳು ಮತ್ತು ಒಬ್ಬ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇದನ್ನು ಓದಿ: ಅಭಯಾರಣ್ಯದಲ್ಲಿನ ತೋಳಗಳ ನಡವಳಿಕೆ ಅಧ್ಯಯನ: ವರ್ಷಾಂತ್ಯಕ್ಕೆ ವರದಿ ಬಿಡುಗಡೆ - Report on Wolves