ಅಯೋಧ್ಯೆ(ಉತ್ತರ ಪ್ರದೇಶ): ಇಲ್ಲಿಯವರೆಗೆ ಅಯೋಧ್ಯೆಯ ತಾತ್ಕಾಲಿಕ ದೇಗುಲದಲ್ಲಿದ್ದ ಹಳೆಯ ರಾಮಲಲ್ಲ ಮೂರ್ತಿಯನ್ನು ಸೋಮವಾರ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಿರುವ ನೂತನ ಬಾಲರಾಮನ ಪ್ರತಿಮೆಯ ಎದುರು ಕೂರಿಸಲಾಗುವುದು ಎಂದು ಶ್ರೀರಾಮನ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಗೋವಿಂದದೇವ ಗಿರಿ ಸ್ಪಷ್ಟಪಡಿಸಿದರು.
"ಹಳೆಯ ವಿಗ್ರಹ ಐದಾರು ಇಂಚು ಎತ್ತರವಿದೆ. 25ರಿಂದ 30 ಅಡಿ ದೂರದಿಂದ ನೋಡಿದರೆ ಅದು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಹೀಗಾಗಿ 51 ಇಂಚುಗಳ ಹೊಸ ಮೂರ್ತಿ ಅಗತ್ಯವಾಯಿತು" ಎಂದು ಅವರು ಹೇಳಿದರು.
ರಾಮಮಂದಿರ ನಿರ್ಮಾಣಕ್ಕೆ ಇಲ್ಲಿಯವರೆಗೆ 1,100 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಲಾಗಿದೆ. ಈ ವರ್ಷ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಇನ್ನೂ 300 ಕೋಟಿ ರೂ ಅಗತ್ಯವಿದೆ. ಭವ್ಯ ದೇಗುಲಕ್ಕೆ ಮೂವರು ಶಿಲ್ಪಿಗಳು ಕೆತ್ತಿದ ವಿಗ್ರಹಗಳ ಪೈಕಿ ಮೈಸೂರಿನ ಅರುಣ್ ಯೋಗಿರಾಜ್ ರಚಿಸಿದ ಪ್ರತಿಮೆಯನ್ನು ಆಯ್ಕೆ ಮಾಡಲು ಸಾಕಷ್ಟು ಚರ್ಚೆ ನಡೆದಿತ್ತು ಎಂದು ಅವರು ಹೇಳಿದರು.
ಬಾಲರಾಮನ ಪ್ರಾಣ ಪ್ರತಿಷ್ಠೆಯ ನಂತರ ಮುಂದಿನ ಯೋಜನೆ ಏನು ಎಂಬ ಕುರಿತು ಮಾತನಾಡಿದ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಜನವರಿ 23ರಿಂದ ಮತ್ತೆ ನಿರ್ಮಾಣ ಕೆಲಸ ಆರಂಭಿಸುತ್ತೇವೆ. ದೇವಸ್ಥಾನದ ಆವರಣದಲ್ಲಿ ಇನ್ನೂ ಏಳು ಉಪಾಲಯಗಳನ್ನು ನಿರ್ಮಿಸಬೇಕಿದೆ ಎಂದರು.
3 ಹಂತಗಳಲ್ಲಿ ಭದ್ರತೆ: ಅಯೋಧ್ಯೆಯಲ್ಲಿ ಇಂದು ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಮೂರು ಹಂತದ ಭದ್ರತೆ ಒದಗಿಸಿದ್ದಾರೆ. ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕೂಡ ಗಸ್ತಿನಲ್ಲಿ ಭಾಗವಹಿಸಲಿದೆ. ಸೆಲೆಬ್ರಿಟಿಗಳು ಸಂಚರಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಮುಳ್ಳುತಂತಿ ಬೇಲಿಗಳಿರುವ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಭಕ್ತರಿಂದ ಕಿಕ್ಕಿರಿದು ತುಂಬಿರುವ ಧರ್ಮಪಥ್ ಮತ್ತು ರಾಂಪತ್ ಪ್ರದೇಶಗಳಿಂದ ಪೊಲೀಸರು ಹನುಮಾನಂಗಡಿ ಮತ್ತು ಅಶರ್ಫಿ ಭವನದ ಬೀದಿಗಳಲ್ಲಿ ಗಸ್ತು ನಡೆಸಲಿದ್ದಾರೆ. ಅಯೋಧ್ಯೆ ಜಿಲ್ಲೆ ಹಾಗೂ ಕೆಂಪು ವಲಯ ಮತ್ತು ಹಳದಿ ವಲಯದ ಪ್ರತಿಯೊಂದು ರಸ್ತೆಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳ ಸಹಾಯದಿಂದ ಸರಯೂ ನದಿಯುದ್ದಕ್ಕೂ ಭದ್ರತೆ ಹೆಚ್ಚಿಸಲಾಗಿದೆ. ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಗಡಿಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಜನಸಂದಣಿ ನಿಯಂತ್ರಿಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲೂ ಬಿಗಿ ಭದ್ರತೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ವಿವಿಧ ದೇವಾಲಯಗಳು, ಮಾರುಕಟ್ಟೆಗಳಲ್ಲಿ ಬಹು ಹಂತದ ಭದ್ರತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೋಟೆಲ್‌ಗಳು, ಅತಿಥಿ ಗೃಹಗಳು ಮತ್ತು ಆಸ್ಪತ್ರೆಗಳಲ್ಲಿ ಪೊಲೀಸ್ ಗಸ್ತು ನಡೆಸಲಾಗುತ್ತಿದೆ.
ಇದನ್ನೂ ಓದಿ: ಶತಮಾನದ ಕನಸು ನನಸಾಗುವ ಅಮೃತ ಘಳಿಗೆ: ಅಯೋಧ್ಯೆಗಾಗಿ 500 ವರ್ಷಗಳಲ್ಲಿ ನಡೆದಿದ್ದೇನು?