ಮಲಪ್ಪುರಂ (ಕೇರಳ): ಐದು ದಿನಗಳಿಂದ ತಿನ್ನಲು ಏನೂ ಸಿಗದೇ ಹಸಿವಿನಿಂದ ಕಂಗೆಟ್ಟಿದ ಯುವಕನೊಬ್ಬ ಬೆಕ್ಕಿನ ಹಸಿ ಮಾಂಸವನ್ನು ತಿಂದಿರುವ ಆಘಾತಕಾರಿ ಘಟನೆ ಕೇರಳದಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಸದ್ಯ ಆತನಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಪೊಲೀಸರ ಸುಪರ್ದಿಯಲ್ಲಿದ್ದಾನೆ.
ಏನಾಯ್ತು?: ಕೇರಳದ ಮಲ್ಲಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂ ಎಂಬಲ್ಲಿ ಅಸ್ಸೋಂ ಮೂಲದ ಯುವಕ ಬಸ್ ನಿಲ್ದಾಣದಲ್ಲಿ ಬೆಕ್ಕಿನ ಹಸಿ ಮಾಂಸವನ್ನು ತಿನ್ನುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿ ಗಾಬರಿಗೊಂಡ ಜನರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ಯುವಕನನ್ನು ವಿಚಾರಿಸಿದ್ದಾರೆ. ಈ ವೇಳೆ ಆತ ಐದು ದಿನಗಳಿಂದ ಏನನ್ನೂ ತಿಂದಿಲ್ಲ. ಹೀಗಾಗಿ, ಹಸಿವು ತಾಳದೇ ಬೆಂಕಿನ ಮಾಂಸ ತಿಂದಿರುವುದಾಗಿ ಹೇಳಿದ್ದಾನೆ.
ಪೊಲೀಸರು, ಅಲ್ಲಿಯೇ ಯುವಕನಿಗೆ ಊಟ ಕೊಡಿಸಿದ್ದಾರೆ. ಬಳಿಕ ಯುವಕನ ಬಗ್ಗೆ ವಿಚಾರಿಸಿದಾಗ, ಆತ ಅಸ್ಸೋಂನ ಧುಬ್ರಿ ಜಿಲ್ಲೆಯವನು ಅನ್ನೋದು ತಿಳಿದುಬಂದಿದೆ. ತಾನು ಕಾಲೇಜು ವಿದ್ಯಾರ್ಥಿಯಾಗಿದ್ದು, ಕಳೆದ ಡಿಸೆಂಬರ್‌ನಲ್ಲಿಯೇ ಇಲ್ಲಿಗೆ ಬಂದಿದ್ದೇನೆ. ಈ ಬಗ್ಗೆ ತನ್ನ ಕುಟುಂಬಕ್ಕೆ ಮಾಹಿತಿ ನೀಡಿಲ್ಲ. ಹೇಳದೇ ಕೇಳದೆ ರೈಲು ಹತ್ತಿ ಕೇರಳ ತಲುಪಿದೆ ಎಂದು ಮಾಹಿತಿ ನೀಡಿದ್ದಾನೆ.
ಐದು ದಿನಗಳಿಂದ ಉಪವಾಸ: ಚೆನ್ನೈನಲ್ಲಿ ತನ್ನ ಬಂಧುಗಳು ಇದ್ದಾರೆ ಎಂದು ಯುವಕ ತಿಳಿಸಿದ್ದಾನೆ. ಅವರ ಮೊಬೈಲ್ ಸಂಖ್ಯೆ ಪಡೆದು ಸಂಪರ್ಕಿಸಲಾಗಿದೆ. ನಡೆದ ಘಟನೆಯ ಬಗ್ಗೆ ಅವರಿಗೂ ಮಾಹಿತಿ ನೀಡಲಾಗಿದೆ. ಈತನ ಸಂಬಂಧಿಕರು ಬಂದ ಬಳಿಕ ಅವರಿಗೆ ಯುವಕನನ್ನು ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದರು.
ಯುವಕ ಕಳೆದ ಐದು ದಿನಗಳಿಂದ ಏನನ್ನೂ ಸೇವಿಸಿಲ್ಲ. ಆಹಾರವೇನೂ ಏನೂ ಸಿಕ್ಕದಿದ್ದಾಗ ತೀವ್ರ ಹಸಿವಿನಿಂದ ಕಂಗೆಟ್ಟು ಬೆಕ್ಕಿನ ಮಾಂಸವನ್ನೇ ತಿಂದಿದ್ದಾನೆ. ಬೆಂಕನ್ನು ಕೊಂದು ತಿಂದಿದ್ದಾನೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ಸದ್ಯ ಯುವಕನಿಗೆ ಆಹಾರ ಕೊಡಿಸಲಾಗಿದೆ. ಅವರ ಬಂಧುಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯುವಕನಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ತ್ರಿಶೂರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಗೆ ಯಾವುದೇ ದೈಹಿಕ ಅಥವಾ ಮಾನಸಿಕ ಸಮಸ್ಯೆಗಳಿಲ್ಲ ಎಂದು ತಿಳಿದುಬಂದಿದೆ. ಬಸ್ ನಿಲ್ದಾಣದಲ್ಲಿ ಜನರೆದುರೇ ಬೆಕ್ಕಿನ ಮಾಂಸ ತಿನ್ನುತ್ತಿರುವುದು ಅಲ್ಲಿದ್ದವರನ್ನು ಗಾಬರಿಗೊಳಿಸಿದೆ. ಯುವಕ ಅಸ್ಸೋಂನಿಂದ ಇಲ್ಲಿಗೆ ಬಂದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ನಾಯಿ ಸಾಕುವ ವಿಚಾರಕ್ಕೆ ಕೈ ಕೈ ಮಿಲಾಯಿಸಿದ ಮನೆ ಮಾಲೀಕರು - ಬಾಡಿಗೆದಾರ ಮಹಿಳೆ