ನವದೆಹಲಿ: ಅಸ್ಸಾಂನ ಅಹೋಂ ರಾಜಮನೆತದ ದಿಬ್ಬದ ಸಮಾಧಿ ವ್ಯವಸ್ಥೆ 'ಮೊಯಿದಮ್ಸ್' ಇದೀಗ ಯುನೆಸ್ಕೋನ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಮೂಲಕ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ಸೇರಿದ ಮೊದಲ ಈಶಾನ್ಯ ರಾಜ್ಯದ ತಾಣ ಎಂಬ ಹೆಗ್ಗಳಿಕೆಯನ್ನು ಇದು ಹೊಂದಲಿದೆ.
ಭಾರತದಲ್ಲಿ ವಿಶ್ವ ಪಾರಂಪರಿಕ ಸಮಿತಿ (ಡಬ್ಲ್ಯೂಎಚ್ಸಿ)ಯ 46ನೇ ಸಮ್ಮೇಳನ ನಡೆಯುತ್ತಿದ್ದು, ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ ಸ್ಥಳಗಳ ಹೆಸರು ಪ್ರಕಟಿಸಲಾಗಿದೆ. 2023-24ರಲ್ಲಿ ಮೊಯಿದಮ್ಸ್ ಅನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವಂತೆ ಭಾರತ ನಾಮನಿರ್ದೇಶನ ಮಾಡಿತ್ತು.
ಮೊಯಿದಮ್ಸ್ ವಿಶೇಷತೆ: ಪಿರಮಿಡ್ ರೀತಿಯ ಆಕೃತಿ ಹೊಂದಿರುವ ವಿಶಿಷ್ಠ ಸಮಾಧಿ ವ್ಯವಸ್ಥೆಯ ದಿಬ್ಬದ ಸ್ಥಳವಿದು. ಇದನ್ನು ತೈ ಅಹೋಮ್ ರಾಜಮನೆತ ಬಳಸುತ್ತಿದ್ದು, ಈ ಮನೆತನ ಅಸ್ಸಾಂನಲ್ಲಿ 600 ವರ್ಷಗಳ ಕಾಲ ಆಳ್ವಿಕೆ ನಡೆಸಿತ್ತು.
🔴 BREAKING!
— UNESCO 🏛️ #Education #Sciences #Culture 🇺🇳 (@UNESCO) July 26, 2024
New inscription on the @UNESCO #WorldHeritage List: Moidams – the Mound-Burial System of the Ahom Dynasty, #India 🇮🇳.
➡️https://t.co/FfOspAHOlX #46WHC pic.twitter.com/H3NU2AdtIq
ಸ್ಥಾನ ಪಡೆದ ಇತರೆ ಸ್ಥಳಗಳು: ಇದರ ಜೊತೆಗೆ, ವಿಶ್ವದ ವಿವಿಧ ಪ್ರದೇಶಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ವಿಶೇಷವೆಂದರೆ ಯುದ್ಧ ಭೂಮಿ ಪ್ಯಾಲೆಸ್ಟೈನ್‌ನ ಸೈಂಟ್ ಹಿಲರಿಯನ್ ಮೊನೆಸ್ಟರಿ ಅಥವಾ ಟೆಲ್ ಉಮ್ ಅಮೆರ್ ಕೂಡ ಯುನೆಸ್ಕೋ ಪಟ್ಟಿ ಸೇರಿದೆ. ಈ ತಾಣವನ್ನು ವಿಶ್ವ ಪಾರಂಪರಿಕ ತಾಣ ಮತ್ತು ಅಪಾಯದಲ್ಲಿರುವ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸೇರಿಸಲಾಗಿದೆ.
ಜರ್ಮನಿಯ ಮೊರವಿಯನ್ ಚರ್ಚ್ ಸೆಟಲ್ಮೆಟ್ಸ್, ಜೋರ್ಡನ್ನ ಉಮ್ಮ ಅಲ್ ಜಿಮಲ್, ಚೀನಾದ ಮರಳು ಮತ್ತು ಸರೋವರ ಗೋಪುರ ಹೊಂದಿರುವ ಬಡೈನ್ ಜಾರನ್ ಮರುಭೂಮಿ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ವಿಶ್ವದ ಸಾಂಸ್ಕೃತಿಕ ಶ್ರೀಮಂತಿಕೆ, ಪಾರಂಪರಿಕ ತಾಣಗಳನ್ನು ಸಂರಕ್ಷಿಸಿ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುನೆಸ್ಕೊ ಜಗತ್ತಿನ ಮೂಲೆಮೂಲೆಗಳಲ್ಲಿರುವ ಪಾರಂಪರಿಕ ತಾಣಗಳ ಪರಿಶೀಲನೆ ನಡೆಸಿ, ಅವುಗಳನ್ನು ಈ ಪಟ್ಟಿಯನ್ನು ಸೇರ್ಪಡೆ ಮಾಡುತ್ತದೆ.
ಪ್ರವಾಸೋದ್ಯಮ ಸಚಿವರಿಂದ ಸ್ವಾಗತ: ಅಸ್ಸಾಂನ ಮೊಯಿದಮ್ಸ್ ದಿಬ್ಬ ಸಮಾಧಿ ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕುರಿತು ಮಾತನಾಡಿರುವ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖವತ್, ಈ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡಲಾಗುವುದು ಎಂದಿದ್ದಾರೆ. ಅಲ್ಲದೇ ಈ ಸ್ಥಳವನ್ನು ಪಾರಂಪರಿಕ ಪಟ್ಟಿಯಲ್ಲಿ ಸೇರಿಸಿದ್ದಕ್ಕೆ ಯುನೆಸ್ಕೋಗೆ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ರಾಜ್ಯಕ್ಕೆ ಮತ್ತೊಂದು ಹೆಮ್ಮೆಯ ಗರಿ.. ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆ