ಗುವಾಹಟಿ: ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಡಿ ಡಬಲ್ ಬಳಸಿದ್ದಾರೆ ಎನ್ನುವ ಆರೋಪ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಅಂದು ಅಸ್ಸಾಂನ ಲೆಗ್ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ ಅವರ ಬಾಡಿ ಡಬಲ್ ಹೆಸರನ್ನು ಇದೀಗ ಬಹಿರಂಗಪಡಿಸಿದ್ದಾರೆ.
ಗುವಾಹಟಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ ಅವರು, "ರಾಹುಲ್ ಗಾಂಧಿ ಅವರ ಬಾಡಿ ಡಬಲ್ ಹೆಸರು ಕುರುಕ್ಷೇತ್ರ ಮತ್ತು ಅವರು ಮಧ್ಯಪ್ರದೇಶಕ್ಕೆ ಸೇರಿದವರು. ಆ ವ್ಯಕ್ತಿ ರಾಹುಲ್ ಗಾಂಧಿ ಅವರೊಂದಿಗೆ ಮಣಿಪುರದಿಂದ ಅಸ್ಸಾಂನ ನಾಗಾನ್ ವರೆಗೆ ಪ್ರಯಾಣಿಸಿದ್ದಾರೆ. ಆ ವ್ಯಕ್ತಿಯನ್ನು ಸುದ್ದಿ ಸಂಸ್ಥೆಯೊಂದು ಬಹಿರಂಗಪಡಿಸಿತ್ತು. ನಂತರ ಆ ವ್ಯಕ್ತಿ ಅಸ್ಸಾನಿಂದ ದೆಹಲಿಗೆ, ನಂತರ ಮಧ್ಯಪ್ರದೇಶಕ್ಕೆ ಪ್ರಯಾಣಿಸಿದ್ದಾರೆ." ಎಂದು ಆರೋಪಿಸಿದ್ದಾರೆ.
ಕೇವಲ ಆ ವ್ಯಕ್ತಿ ರಾಹುಲ್ ಅವರನ್ನು ಹೋಲುತ್ತಿದ್ದರೆ, ಬಾಡಿ ಡಬಲ್ ಅಲ್ಲದೇ ಇದ್ದರೆ, ಅವರನ್ನು ಮಾಧ್ಯಮಗಳ ಮುಂದೆ ಯಾಕೆ ಪ್ರಸ್ತುಪಡಿಸಲಿಲ್ಲ? ಜೊತೆಗೆ ಯಾವುದೇ ಮಾಧ್ಯಮಗಳ ಪ್ರಸಾರವಿಲ್ಲದೆ, ಆ ವ್ಯಕ್ತಿಯನ್ನು ಅಸ್ಸಾಂಗೆ ಪ್ರಯಾಣಿಸಲು ಯಾಕೆ ಅನುಮತಿ ನೀಡಲಾಯಿತು ಎಂದು ಶರ್ಮಾ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ನನ್ನ ಬಳಿ ಎಲ್ಲ ವಿವರಗಳಿವೆ. ಸದ್ಯದಲ್ಲೇ ಬಿಜೆಪಿ ಕಚೇರಿಯಲ್ಲಿ ದೂರವಾಣಿ ದಾಖಲೆ ಸೇರಿದಂತೆ ಎಲ್ಲಾ ವಿವರಗಳನ್ನು ಹಂಚಿಕೊಳ್ಳುವುದಾಗಿ ಸಿಎಂ ತಿಳಿಸಿದರು. ಜನವರಿ 25ರಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು, ಅಸ್ಸಾಂನಲ್ಲಿ ಭಾರತ್ ಜೋಡೋ ಯಾತ್ರೆಯ ಮೆರವಣಿಗೆಯಲ್ಲಿ ರಾಹುಲ್ ಗಾಂಧಿ ಬಾಡಿ ಡಬಲ್ ಬಳಸಿದ್ದರು ಎಂದು ಆರೋಪಿಸಿದ್ದರು. ಒಂದು ವರದಿಯನ್ನು ಹಂಚಿಕೊಂಡಿದ್ದ ಸಿಎಂ, "ಯಾತ್ರಾ ಬಸ್ನಲ್ಲಿ ಕುಳಿತು ಜನರತ್ತ ಕೈ ಬೀಸುತ್ತಿರುವ ವ್ಯಕ್ತಿ ಬಹುಶಃ ರಾಹುಲ್ ಗಾಂಧಿ ಅಲ್ಲ" ಎಂದು ಪೋಸ್ಟ್ ಮಾಡಿದ್ದರು.
ರಾಹುಲ್ ಗಾಂಧಿ ವಿರುದ್ಧದ ಆರೋಪದ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದ ಸಂದರ್ಭದಲ್ಲಿಯೂ, ನಾನು ಸುಮ್ಮನೆ ಆರೋಪ ಮಾಡುತ್ತಿಲ್ಲ. ಬಾಡಿ ಡಬಲ್ ಹೆಸರು, ಮತ್ತು ಅದನ್ನು ಹೇಗೆ ಮಾಡಲಾಗಿದೆ ಈ ಬಗ್ಗೆ ಎಲ್ಲ ವಿವರಗಳನ್ನು ಹಂಚಿಕೊಳ್ಳುತ್ತೇನೆ. ಕೆಲವು ದಿನಗಳು ಕಾಯಿರಿ" ಎಂದು ಪ್ರತಿಕ್ರಿಯೆ ನೀಡಿದ್ದರು. ಈಗ ತಾವು ಮಾಡಿರುವ ಆರೋಪವನ್ನು ಸಾಬೀತುಪಡಿಸಲು ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಾಡಿ ಡಬಲ್ ಹೆಸರನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ, ಇತರೆ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್: ಅಸ್ಸಾಂ ಸಿಎಂ ಹಿಮಂತ ಶರ್ಮಾ