ನವದೆಹಲಿ: ಬಿಜೆಪಿಯಲ್ಲಿ 75 ವರ್ಷಕ್ಕೆ ನಿವೃತ್ತಿ ನಿಯಮವಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನ್ವಯಿಸುವುದಿಲ್ಲವೇ?. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಆರ್‌ಎಸ್‌ಎಸ್ ನಿಲುವೇನು ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರಶ್ನಿಸಿದರು.
ಜಂತರ್ಮಂತರ್ನಲ್ಲಿ ಇಂದು ನಡೆದ ಜನತಾ ಅದಾಲತ್ನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಗಳನ್ನು ಉರುಳಿಸಲು ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಕೇಂದ್ರೀಯ ತನಿಖಾ ದಳ(ಸಿಬಿಐ) ಅನ್ನು ದುರುಪಯೋಗಪಡಿಸಿಕೊಂಡಿದೆ. ಇದು ಸಮಂಜಸವೇ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸ್ಪಷ್ಟಪಡಿಸಬೇಕು ಎಂದರು.
#WATCH | AAP national convenor Arvind Kejriwal says, " these leaders have thick skin, they are not affected by the allegations, i am affected, i am not a leader...i will leave the cm's bungalow in a few days, i don't even have a house...i have earned only love in ten years, the… pic.twitter.com/tH1Mpog8Ou
— ANI (@ANI) September 22, 2024
ಆರ್ಎಸ್ಎಸ್ಗೆ ಪಂಚಪ್ರಶ್ನೆ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದು ಸಮಂಜಸವೇ?. ಆರ್‌ಎಸ್‌ಎಸ್‌ನಿಂದ ಬಿಜೆಪಿ ಹುಟ್ಟಿದೆ. ಆದರೆ, ಈಗ ಆ ಪಕ್ಷದ ರಾಜಕೀಯದಿಂದ ಆರ್‌ಎಸ್‌ಎಸ್ ಸದಸ್ಯರು ತೃಪ್ತರಾಗಿದ್ದಾರೆಯೇ?. ಬಿಜೆಪಿಯವರಿಗೆ 75ನೇ ವಯಸ್ಸಿಗೆ ನಿವೃತ್ತಿಯಾಗಬೇಕೆಂಬ ನಿಯಮವಿದೆಯೇ?, ಪ್ರಧಾನಿ ನರೇಂದ್ರ ಮೋದಿಯವರಿಗೆ ಇದು ಅನ್ವಯಿಸುತ್ತದೆಯೇ?. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ತಮ್ಮ ಪಕ್ಷಕ್ಕೆ ಆರೆಸ್ಸೆಸ್ ಅಗತ್ಯವಿಲ್ಲ ಎಂದು ಹೇಳಿದಾಗ ನಿಮಗೆ ಏನನ್ನಿಸಿತು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಉತ್ತರಿಸಬೇಕು ಎಂದು ಕೇಜ್ರಿವಾಲ್ ಕೋರಿದ್ದಾರೆ.
ಭ್ರಷ್ಟಾಚಾರ ಆರೋಪ ಬಂದ ಹಿನ್ನೆಲೆಯಲ್ಲಿ ನಾನು ರಾಜೀನಾಮೆ ನೀಡಿದ್ದೇನೆ. ರಾಜಕೀಯಕ್ಕೆ ಬಂದಿದ್ದು, ಸಿಎಂ ಖುರ್ಚಿಗಾಗಿ ಅಥವಾ ಭ್ರಷ್ಟಾಚಾರ ನಡೆಸಲು ಅಲ್ಲ. ಜನರ ಸೇವೆ ಮಾಡಲು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ. ಕಳೆದ 10 ವರ್ಷದಲ್ಲಿ ನಾನು ಜನರ ಪ್ರೀತಿಯನ್ನು ಸಂಪಾದಿಸಿದೆ ಬಿಟ್ಟರೆ, ಏನನ್ನೂ ಗಳಿಸಿಲ್ಲ. ಆದಾಗ್ಯೂ ನನ್ನ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಲಾಗಿದೆ. ಇದರಿಂದ ನೊಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಅಧಿಕೃತ ನಿವಾಸವೂ ಇಲ್ಲ. ಜನರೇ ತಮ್ಮ ನಿವಾಸವನ್ನು ನೀಡಲು ಮುಂದೆ ಬಂದಿದ್ದಾರೆ ಎಂದು ದೆಹಲಿ ಮಾಜಿ ಸಿಎಂ ಹೇಳಿದರು.
10 ವರ್ಷ ಅಧಿಕಾರದಲ್ಲಿದ್ದರೂ ಮನೆ ಇಲ್ಲ: ಸಿಎಂ ಅಧಿಕೃತ ನಿವಾಸವನ್ನು ಶೀಘ್ರವೇ ತೆರವು ಮಾಡುವೆ. ಜನರ ಮನೆಗೆ ಬಂದು ವಾಸ್ತವ್ಯ ಹೂಡುವೆ. ಕೇಜ್ರಿವಾಲ್ ಕಳ್ಳ ಎಂದು ನಿಮಗೆ ಅನಿಸುತ್ತಿದೆಯೇ? ಅಥವಾ ನನ್ನನ್ನು ಜೈಲಿಗೆ ಕಳುಹಿಸಿದವರು ಕಳ್ಳರೇ? ಮುಂಬರುವ ದೆಹಲಿ ವಿಧಾನಸಭೆ ಚುನಾವಣೆ ಅಗ್ನಿ ಪರೀಕ್ಷೆಯಂತಿದೆ. ನಾನು ಅಪ್ರಾಮಾಣಿಕ ಎಂದು ನೀವು ಭಾವಿಸಿದರೆ ನನಗೆ ಮತ ಹಾಕಬೇಡಿ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 10 ವರ್ಷಗಳು ಕಳೆದರೂ ದೆಹಲಿಯಲ್ಲಿ ಇನ್ನೂ ಸ್ವಂತ ಮನೆ ಇಲ್ಲ. ಮನೀಶ್ ಸಿಸೋಡಿಯಾ ಅವರನ್ನು ಭ್ರಷ್ಟರೆಂದು ಬಿಂಬಿಸುವ ಮೂಲಕ ಪಿತೂರಿ ನಡೆಸಿದರು. ದೇಶದ ಬದಲಾವಣೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಮುಂದೆಯೂ ಅದರ ವಿರುದ್ಧ ಹೋರಾಡುತ್ತೇನೆ ಎಂದು ಕೇಜ್ರಿವಾಲ್ ಘೋಷಿಸಿದರು.
ಇದನ್ನೂ ಓದಿ: ದೆಹಲಿ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ಸ್ವೀಕಾರ: ಮೂರನೇ 'ಮಹಿಳಾ ಸಿಎಂ' ಅಭಿದಾನ - Atishi takes oath