ಕುಲ್ಗಾಮ್, ಜಮ್ಮು ಕಾಶ್ಮೀರ: ಸೇನಾ ವಾಹನವೊಂದು ಆಯತಪ್ಪಿ ಕಂದಕಕ್ಕೆ ಉರುಳಿದ ಪರಿಣಮ ಒಬ್ಬ ಯೋಧ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ದಮ್ಹಾಲ್ ಹಂಜಿಪೋರಾದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಯೋಧರನ್ನು ಪೊಲೀಸರು ಮತ್ತು ಸೇನಾ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಬಾರಾಮುಲ್ಲಾದ ಬುತಪತ್ರಿ ಪ್ರದೇಶದಲ್ಲಿ ಭಯೋತ್ಪಾದಕರ ಸಂಚು ರೂಪಿಸಿ ಸೇನಾ ವಾಹನದ ಮೇಲಿನ ದಾಳಿಯ ಬೆನ್ನಲ್ಲೇ ಈ ಘಟನೆ ನಡೆದಿದೆ. ಶುಕ್ರವಾರ ಭಯೋತ್ಪಾದಕರು ನಡೆಸಿದ ಈ ದಾಳಿಯಲ್ಲಿ ಇಬ್ಬರು ಯೋಧರು ಹಾಗೂ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಮೂವರು ಯೋಧರು ಗಾಯಗೊಂಡಿದ್ದರು.
ಪಾಕಿಸ್ತಾನದಿಂದ ಒಳ ನುಸುಳುತ್ತಿರುವ ಭಯೋತ್ಪಾದಕರು ಬಾರಾಮುಲ್ಲಾದ ಬುತಪತ್ರಿಯನ್ನು ಅಡಗುತಾಣವಾಗಿಸಿಕೊಂಡು ಸೇನೆಯ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದರು. ಅಡಗಿ ಕುಳಿತು ದಾಳಿ ನಡೆಸುತ್ತಿರುವ ಭಯೋತ್ಪಾದಕರು ಯೋಧರ ರಕ್ಷಾಕವಕ ಸೀಳಿ ನುಗ್ಗುವ ಗುಂಡುಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಶುಕ್ರವಾರ ಬಾರಾಮುಲ್ಲಾದಲ್ಲಿ ಹುತಾತ್ಮರಾದ ಯೋಧರಿಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಜನರಲ್ ಮನೋಜ್ ಸಿನ್ಹಾ ಅಂತಿಮ ಗೌರವ ಸಲ್ಲಿಸಿದರು.
ಇದನ್ನೂ ಓದಿ: ಬಾರಾಮುಲ್ಲಾದಲ್ಲಿ ಸೇನಾ ವಾಹನ ಗುರಿಯಾಗಿಸಿ ದಾಳಿ: ಇಬ್ಬರು ಯೋಧರು, ಕಾರ್ಮಿಕರ ಸಾವು