ನವದೆಹಲಿ: ಏಷ್ಯನ್ ಗೇಮ್ಸ್‌ನಲ್ಲಿ ಈಜು ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಹಿರಿಯ ಅಧಿಕಾರಿಯೊಬ್ಬರು ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಹುದ್ದೆಯಿಂದ ವಜಾಗೊಂಡಿದ್ದಾರೆ. ವಿಶೇಷವೆಂದರೆ, ಇವರ ಸಾಧನೆಗೆ ಅರ್ಜುನ ಪ್ರಶಸ್ತಿಯೂ ಒಲಿದು ಬಂದಿತ್ತು.
ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದು, ಅವರನ್ನು ಹುದ್ದೆಯಿಂದ ವಜಾ ಮಾಡಲು ತನಿಖಾಧಿಕಾರಿಗಳು ಶಿಫಾರಸು ಮಾಡಿದ್ದರು. ಕೇಂದ್ರ ಲೋಕಸೇವಾ ಆಯೋಗದ ನಿರ್ದೇಶನದ ಮೇರೆಗೆ ಕೇಂದ್ರ ಗೃಹ ಸಚಿವಾಲಯವು ಕ್ರಮ ಆದೇಶ ಹೊರಡಿಸಿದೆ.
ಸಿಆರ್‌ಪಿಎಫ್‌ನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಶ್ರೇಣಿಯ ಮುಖ್ಯ ಕ್ರೀಡಾ ಅಧಿಕಾರಿ ಖಾಜನ್ ಸಿಂಗ್ ಹುದ್ದೆಯಿಂದ ವಜಾಗೊಂಡವರು. ಅವರ ವಿರುದ್ಧ ಅರೆಸೇನಾ ಪಡೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಇತ್ತು.
ತನಿಖೆಯಲ್ಲಿ ಬಯಲು: ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿಗೆ ಲೈಂಗಿಕ ಕಿರುಕುಳದ ಆರೋಪದ ಕೇಳಿಬಂದ ನಂತರ ಇಲಾಖಾ ತನಿಖೆ ನಡೆಸಲಾಗಿದೆ. ಇದರಲ್ಲಿ ಅವರು ತಪ್ಪಿತಸ್ಥರು ಸಾಬೀತಾಗಿದೆ. ತರುವಾಯ, ದೇಶದ ಅತಿದೊಡ್ಡ ಅರೆಸೇನಾ ಪಡೆ, ಕೇಂದ್ರೀಯ ಲೋಕಸೇವಾ ಆಯೋಗಕ್ಕೆ ವರದಿಯನ್ನು ಸಲ್ಲಿಸಿತು. ಬಳಿಕ ಅವರನ್ನು ವಜಾಗೊಳಿಸುವಂತೆ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿತ್ತು.
ತನಿಖೆಯಲ್ಲಿ ಖಾಜನ್ ಸಿಂಗ್ ಅವರ ವಿರುದ್ಧದ ಆರೋಪ ನಿಜವಾಗಿದೆ. ಹೀಗಾಗಿ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.
CRPF ಮುಖ್ಯ ಕ್ರೀಡಾ ಅಧಿಕಾರಿಯಾಗಿರುವ ಖಾಜನ್ ಸಿಂಗ್ ಅವರು 1986 ರ ಸಿಯೋಲ್ ಏಷ್ಯನ್ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 200 ಮೀಟರ್ ಬಟರ್‌ಫ್ಲೈ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಇದು ಈವೆಂಟ್ನಲ್ಲಿ ಭಾರತಕ್ಕೆ ಮೊದಲ ಪದಕವಾಗಿತ್ತು.
ಪ್ರಸ್ತುತ ಮುಂಬೈನಲ್ಲಿರುವ ಖಾಜನ್ ಸಿಂಗ್ ಅವರಿಗೆ ವಜಾ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಹಿಂದೆ ಅವರು ತಮ್ಮ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ್ದರು. ತಮ್ಮ ಖ್ಯಾತಿಗೆ ಕಳಂಕ ತರುವ ಉದ್ದೇಶದಿಂದ ಈ ಆರೋಪ ಮಾಡಲಾಗಿದೆ ಎಂದು ಹೇಳಿದ್ದರು.
3.25 ಲಕ್ಷ ಸಿಬ್ಬಂದಿಯನ್ನು ಹೊಂದಿರುವ ದೇಶದ ಅತಿದೊಡ್ಡ ಅರೆಸೇನಾ ಪಡೆಯಾದ ಸಿಆರ್ಪಿಎಫ್ನಲ್ಲಿ 1986 ರಿಂದ ಮಹಿಳಾ ಯೋಧರನ್ನೂ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈಗ ಆರು ಮಹಿಳಾ ಬೆಟಾಲಿಯನ್‌ಗಳನ್ನು ಒಳಗೊಂಡಿದೆ. ಒಟ್ಟು 8,000 ಸಿಬ್ಬಂದಿ ಇದ್ದಾರೆ.
ಇದನ್ನೂ ಓದಿ: ಮಣಿಪುರದ ನರಸೇನಾದಲ್ಲಿ ಉಗ್ರರ ದಾಳಿ: ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮ - Kuki Militants Attack On CRPF