ಅಮರಾವತಿ: ಸಾರ್ವತ್ರಿಕ ಚುನಾವಣಾ ಹೊತ್ತಿನಲ್ಲಿ ರಾಜ್ಯ ಸರ್ಕಾರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಬಳಕೆಗಾಗಿ ಎರಡು ಹೊಸ ಬ್ರಾಂಡ್ ಹೆಲಿಕಾಪ್ಟರ್‌ಗಳನ್ನು ಬಾಡಿಗೆ ಪಡೆಯಲು ಮುಂದಾಗಿದೆ. ವಿಜಯವಾಡದ ಗನ್ನವರಂ ವಿಮಾನ ನಿಲ್ದಾಣದಲ್ಲಿ ಮತ್ತು ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಸಿಎಂ ಓಡಾಟಕ್ಕೆ ಈ ಹೆಲಿಕಾಪ್ಟರ್ಗಳು ಲಭ್ಯವಿರಲಿವೆ. ಗ್ಲೋಬಲ್ ವೆಕ್ಟ್ರಾ ಕಂಪನಿಯಿಂದ ಈ ಎರಡು ಹೆಲಿಕಾಪ್ಟರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಖರೀದಿಸಲಾಗುತ್ತಿದೆ. ಈ ವಿಮಾನಕ್ಕೆ ತಿಂಗಳ ಬಾಡಿಗೆ ಕ್ರಮವಾಗಿ 1,91,75,000 ಮತ್ತು 3,83,50,000 ರೂ ಆಗಿದೆ.
ಇದೇ ಮೇ ತಿಂಗಳಲ್ಲಿ ಜಗನ್ ಸರ್ಕಾರದ ಅವಧಿ ಮುಗಿಯಲಿದೆ. ಈ ಹೊತ್ತಿನಲ್ಲಿ ಮೂರು ತಿಂಗಳ ಬಾಡಿಗೆಗಾಗಿ ಈ ಹೆಲಿಕಾಪ್ಟರ್ಗೆ ಸರ್ಕಾರ 11.50 ಕೋಟಿ ಪಾವತಿ ಮಾಡಬೇಕಿದೆ. ಇದರ ಹೊರತಾಗಿ ಇದರ ನಿರ್ವಹಣೆ ವೆಚ್ಚ, ಪೈಲಟ್ಗಳಿಗೆ ಸ್ಟಾರ್ ಹೋಟೆಲ್ ವಾಸ್ತವ್ಯ, ಪೈಲಟ್ಗಳ ಸಾರಿಗೆ ವೆಚ್ಚ ಮತ್ತು ತಾಂತ್ರಿಕ ಸಿಬ್ಬಂದಿಗಳ ವೆಚ್ಚ, ಇಂಧನ ಸಾರಿಗೆ ವೆಚ್ಚ, ಹೆಲಿಕಾಪ್ಟರ್ ಸಿಬ್ಬಂದಿಗಳ ವೈದ್ಯಕೀಯ ಖರ್ಚು ಮತ್ತು ಎಟಿಸಿ ವೆಚ್ಚವನ್ನು ಹೆಚ್ಚುವರಿಯಾಗಿ ವಿಧಿಸಲಾಗುವುದು. ಹೆಲಿಕಾಪ್ಟರ್ ಖರೀದಿಗೆ ಅನುಮತಿ ನೀಡಿ ಗುರುವಾರ ಹೂಡಿಕೆ ಮತ್ತು ಮೂಲಸೌಕರ್ಯ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಎನ್. ಯುವರಾಜ್ ಆದೇಶಿಸಿದ್ದಾರೆ.
ಭದ್ರತಾ ಬೆದರಿಕೆ ಹಿನ್ನೆಲೆ ಹೆಲಿಕಾಪ್ಟರ್: ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಗೆ ಜೆಡ್ ಪ್ಲಸ್ ಕ್ಯಾಟಗರಿ ಭದ್ರತೆ ನೀಡಲಾಗಿದೆ. ಎಡಪಂಥೀಯ ತೀವ್ರವಾದಿಗಳಿಂದ, ಉಗ್ರರು, ಅಪರಾಧಿ ಗ್ಯಾಂಗ್ ಸಂಘಟನೆ ಮತ್ತು ಸಾಮಾಜಿಕ ವಿರೋಧಿ ಗುಂಪಿನಿಂದ ಸಿಎಂ ಬೆದರಿಕೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಅವರ ಭದ್ರತಾ ವ್ಯವಸ್ಥೆಯಲ್ಲಿ ಹೆಚ್ಚಿನ ಜಾಗೃತಿವಹಿಸಲಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಭೇಟಿಗಾಗಿ ನಾಗರಿಕ ವಿಮಾನಯಾನ ನಿಗಮವು 2010 ರಿಂದ ಬೆಲ್ 412 ವಿಟಿ ಎಂಆರ್ವಿ ವಿಮಾನವನ್ನು ಬಳಕೆ ಮಾಡುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಬಳಕೆ ಹೆಚ್ಚುತ್ತಿದ್ದು, ದೂರದ ಪ್ರಯಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಹೆಲಿಕಾಪ್ಟರ್ ಅನ್ನು ಬದಲಾಯಿಸಿ ಹೊಸದರ ಅವಶ್ಯಕತೆ ಹೆಚ್ಚಿದೆ ಎಂದು ಗುಪ್ತಚರ ವಿಭಾಗದ ಡಿಜಿಪಿ ಪಿಎಸ್ಆರ್ ಆಂಜನೇಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಹಿನ್ನೆಲೆ ಹೂಡಿಕೆ ಮತ್ತು ಮೂಲ ಸೌಕರ್ಯ ಇಲಾಲೆ ಈ ಬಾಡಿಗೆ ಆಧಾರದ ಮೇಲೆ ಈ ಹೆಲಿಕಾಪ್ಟರ್ ಅನ್ನು ಪಡೆದಿದೆ. ಈ ಹೆಲಿಕಾಪ್ಟರ್ ಅನ್ನು ಸಿಎಂ ಮತ್ತು ಇತರ ವಿವಿಐಪಿಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಚುನಾವಣಾ ಪ್ರಚಾರ: ಮುಂದಿನ 10-15 ದಿನದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆ ಆಗಲಿದೆ. ಎರಡು ತಿಂಗಳೊಳಗೆ ಚುನಾವಣೆ ನಡೆಯಲಿದೆ. ಈ ಸಮಯದಲ್ಲಿ ಸಿಎಂ ಜಗನ್ ಭದ್ರತೆಯ ನೆಪ ಹೇಳಿ ಚುನಾವಣಾ ಪ್ರಚಾರಕ್ಕಾಗಿ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಹಾಕಿ ಹೆಲಿಕಾಪ್ಟರ್ ಬಳಕೆಗೆ ಮುಂದಾಗಿದ್ದಾರೆ ಎಂದು ವಿಪಕ್ಷಗಳು ಟೀಕಿಸಿವೆ.
ಭದ್ರತೆ ನೆಪದಲ್ಲಿ ಅನಗತ್ಯ ಉತ್ಸಾಹ: ಸಿಎಂ ಅವರ ಭದ್ರತೆ ವ್ಯವಸ್ಥೆಯಲ್ಲಿ ಯಾರು ಕೂಡ ಲೋಪವೆಸಗಲು ಸಾಧ್ಯವಿಲ್ಲ. ಆದರೆ, ಆಂಧ್ರ ಪ್ರದೇಶ ಪೊಲೀಸರು ಸಿಎಂ ಭದ್ರತೆ ಹೆಸರಿನಲ್ಲಿ ಅನಗತ್ಯ ಉತ್ಸಾಹ ತೋರಲಾಗುತ್ತಿದೆ ಎಂದು ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.
ಇದನ್ನೂ ಓದಿ: ಭೀಕರ ಅಪಘಾತದಲ್ಲಿ ಯುವ ಶಾಸಕಿ ಲಾಸ್ಯ ನಂದಿತಾ ಸಾವು: ಸಿಎಂ, ಬಿಆರ್‌ಎಸ್ ನಾಯಕರು ಸೇರಿ ಹಲವರಿಂದ ಸಂತಾಪ