ಮುಂಬೈ (ಮಹಾರಾಷ್ಟ್ರ): ಭಾರತದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹದ ಸರ್ವ ಸಿದ್ಧತೆಗಳು ಪೂರ್ಣಗೊಂಡಿವೆ. ಜುಲೈ 12 ರಂದು ಅನಂತ- ರಾಧಿಕಾ ಸಪ್ತಪದಿ ತುಳಿಯಲಿದ್ದಾರೆ. 'ಆಂಟಿಲಿಯಾ' ನಿವಾಸ ಮದುವೆ ಸಮಾರಂಭಕ್ಕಾಗಿ ವಧುವಿನಂತೆ ಅಲಂಕೃತಗೊಂಡಿದೆ.
ದೇಶವಲ್ಲದೇ, ವಿದೇಶದಲ್ಲೂ ಭಾರೀ ಸದ್ದು ಮಾಡುತ್ತಿರುವ ಈ ವಿವಾಹದ ಕೆಲ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮದುವೆಗೆ ಬರುವ ಅತಿಥಿಗಳಿಗೆ ಭಕ್ಷ್ಯ ಭೋಜನ ಉಣಬಡಿಸಲು ಅಂಬಾನಿ ಕುಟುಂಬ ಸಿದ್ಧತೆ ಮಾಡಿಕೊಂಡಿದೆ.
ವಿವಾಹದ ಬಳಿಕ ಜುಲೈ 13 ರಂದು ಆಶೀರ್ವಾದ ಸಮಾರಂಭ, ಜುಲೈ 14 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜುಲೈ 12 ರಂದು ಮಧ್ಯಾಹ್ನ 3 ಗಂಟೆಯವರೆಗೆ ಮದುವೆ ಮನೆಗೆ ಜನರು ಆಗಮಿಸಲಿದ್ದಾರೆ. ರಾತ್ರಿ 8 ಗಂಟೆಗೆ ವರ್ಮಾ ಸಮಾರಂಭ, ರಾತ್ರಿ 9.30ಕ್ಕೆ ಮದುವೆ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಿಗೆ ಸಾಂಪ್ರದಾಯಿಕ ಡ್ರೆಸ್ಕೋಡ್ ನಿಗದಿ ಮಾಡಲಾಗಿದೆ.
ಮದುವೆಯಲ್ಲಿ 'ಬನಾರಸಿ ಚಾಟ್': ಅನಂತ್ ಅಂಬಾನಿ ಮದುವೆಯಲ್ಲಿ ಉತ್ತರಪ್ರದೇಶದ ಪ್ರಸಿದ್ಧ 'ಬನಾರಸಿ ಚಾಟ್' ಗಣ್ಯರಿಗೆ ಉಣ ಬಡಿಸಲಾಗುತ್ತಿದೆ. ಇದನ್ನು ಬನಾರಸ್‌ನಲ್ಲಿರುವ ಪ್ರಸಿದ್ಧ ಅಂಗಡಿ 'ಕಾಶಿ ಚಾಟ್ ಭಂಡಾರ್'ನಿಂದ ತಯಾರಿಸಲಾಗಿದೆ. ಕೆಲ ದಿನಗಳ ಹಿಂದೆ ನೀತಾ ಅಂಬಾನಿ ಅವರು ಕಾಶಿ ಭಂಡಾರ್ಗೆ ತೆರಳಿ, ಮಾತುಕತೆ ನಡೆಸಿದ್ದರು.
100 ಖಾಸಗಿ ವಿಮಾನಗಳು: ವಿವಾಹ ಸಮಾರಂಭಕ್ಕೆ ದೇಶ-ವಿದೇಶಗಳಿಂದ ಬರುವ ಗಣ್ಯರಿಗಾಗಿ 100 ಕ್ಕೂ ಹೆಚ್ಚು ಖಾಸಗಿ ಜೆಟ್‌ಗಳನ್ನು ಮೀಸಲಿಡಲಾಗಿದೆ. ಜೆಟ್ ಇಳಿದ ನಂತರ, ಅಲ್ಲಿಂದ ವಿವಾಹ ಸಮಾರಂಭದ ಸ್ಥಳಕ್ಕೆ ತಲುಪಲು ಐಷಾರಾಮಿ ಕಾರುಗಳು ಇರಲಿವೆ.
ವಿವಾಹ ಸಮಾರಂಭಕ್ಕೆ ಸಿನಿಮಾ ತಾರೆಯರು, ಗಣ್ಯರು, ವಿವಿಧ ರಾಜಕೀಯ ನಾಯಕರನ್ನು ಆಹ್ವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುಟುಂಬಕ್ಕೂ ಆಹ್ವಾನಿಸಲಾಗಿದೆ. ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಟೋನಿ ಬ್ಲೇರ್, ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ, ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್ ಸೇರಿದಂತೆ ವಿವಿಧ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಭದ್ರತೆಗೆ ಎನ್‌ಎಸ್‌ಜಿ ಕಮಾಂಡೋ ನಿಯೋಜನೆ: ಮದುವೆಗೆ ಆಗಮಿಸುವವರ ಭದ್ರತೆಗೆ ಎನ್‌ಎಸ್‌ಜಿ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಸುಮಾರು 2,500 ವಿವಿಧ ಖಾದ್ಯಗಳು ಅತಿಥಿಗಳಿಗೆ ಉಣಬಡಿಸಲಾಗುತ್ತಿದೆ. 10 ಅಂತಾರಾಷ್ಟ್ರೀಯ ಬಾಣಸಿಗರು ಅಡುಗೆ ತಯಾರಿಸಲಿದ್ದಾರೆ. ಅತಿಥಿಗಳಿಗೆ ಕೋಟ್ಯಂತರ ಮೌಲ್ಯದ ವಾಚ್‌ಗಳನ್ನು ಉಡುಗೊರೆಯಾಗಿ ನೀಡಲಾಗುವುದು. ಇಂಟಿಗ್ರೇಟೆಡ್ ಸೆಕ್ಯುರಿಟಿ ಆಪರೇಟಿಂಗ್ ಸಿಸ್ಟಮ್ ಅಳವಡಿಸಲಾಗಿದೆ.