ಜಮ್ಮು: ಕಳೆದ 29 ದಿನಗಳಲ್ಲಿ 4.51 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಅಮರನಾಥ ಯಾತ್ರೆ ಕೈಗೊಂಡಿದ್ದು, ಈ ಸಂಖ್ಯೆ ಕಳೆದ ವರ್ಷದ ದಾಖಲೆಯನ್ನು ಹಿಂದಿಕ್ಕಿದೆ.
"ಜೂನ್ 29 ರಂದು ಯಾತ್ರೆ ಪ್ರಾರಂಭವಾದಾಗಿನಿಂದ ಕಳೆದ 29 ದಿನಗಳಲ್ಲಿ, 4.51 ಲಕ್ಷಕ್ಕೂ ಹೆಚ್ಚು ಜನರು ಪವಿತ್ರ ಗುಹೆಯ 'ದರ್ಶನ' ಮಾಡಿದ್ದಾರೆ. ಇದು ಕಳೆದ ವರ್ಷದ ಯಾತ್ರೆಯ ದಾಖಲೆಯನ್ನು ಮುರಿದಿದೆ" ಎಂದು ವಾರ್ಷಿಕ ಅಮರನಾಥ ತೀರ್ಥಯಾತ್ರೆಯನ್ನು ನಿರ್ವಹಿಸುವ ಶ್ರೀ ಅಮರನಾಥಜಿ ದೇವಾಲಯ ಮಂಡಳಿಯ (ಎಸ್ಎಎಸ್ಬಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶನಿವಾರ, ಸುಮಾರು 8,000 ಯಾತ್ರಾರ್ಥಿಗಳು ಗುಹೆ ದೇವಾಲಯಕ್ಕೆ ಭೇಟಿ ನೀಡಿದ್ದು, 1,677 ಯಾತ್ರಾರ್ಥಿಗಳ ಮತ್ತೊಂದು ತಂಡ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಭಾನುವಾರ ಕಣಿವೆಗೆ ಹೊರಟಿದೆ.
"1,677 ಯಾತ್ರಾರ್ಥಿಗಳ ಪೈಕಿ 408 ಯಾತ್ರಿಗಳ ಮೊದಲ ತಂಡವು ಮುಂಜಾನೆ 3.35 ಕ್ಕೆ 24 ವಾಹನಗಳಲ್ಲಿ ಬೆಂಗಾವಲು ಪಡೆಯೊಂದಿಗೆ ಉತ್ತರ ಕಾಶ್ಮೀರದ ಬಾಲ್ಟಾಲ್ ಬೇಸ್ ಕ್ಯಾಂಪ್ಗೆ ಪ್ರಯಾಣ ಬೆಳೆಸಿದೆ. 1,269 ಯಾತ್ರಿಗಳ ಎರಡನೇ ತಂಡವು 43 ವಾಹನಗಳಲ್ಲಿ ಬೆಂಗಾವಲು ಪಡೆಯೊಂದಿಗೆ ದಕ್ಷಿಣ ಕಾಶ್ಮೀರ ನುನ್ವಾನ್ (ಪಹಲ್ಗಾಮ್) ಬೇಸ್ ಕ್ಯಾಂಪ್ಗೆ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಪಿಎಫ್ ಮತ್ತು ಜೆ &ಕೆ ಪೊಲೀಸರು ಅಸಾಧಾರಣ ಭದ್ರತಾ ವ್ಯವಸ್ಥೆ ಮಾಡಿದ್ದು, ಯಾತ್ರೆ ಈ ವರ್ಷ ಶಾಂತಿಯುತ ಮತ್ತು ಸುಗಮವಾಗಿ ನಡೆಯುತ್ತಿದೆ. ಈ ವರ್ಷದ ಯಾತ್ರೆಯು 52 ದಿನಗಳ ನಂತರ ಆಗಸ್ಟ್ 29 ರಂದು ಶ್ರಾವಣ ಪೂರ್ಣಿಮಾ ಮತ್ತು ರಕ್ಷಾ ಬಂಧನ ಹಬ್ಬಗಳೊಂದಿಗೆ ಕೊನೆಗೊಳ್ಳಲಿದೆ.
ಶ್ರೀ ಅಮರನಾಥ ಗುಹೆಯು ಕಾಶ್ಮೀರದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಭಕ್ತರು ಸಾಂಪ್ರದಾಯಿಕ ದಕ್ಷಿಣ ಕಾಶ್ಮೀರ (ಪಹಲ್ಗಾಮ್) ಮಾರ್ಗದಿಂದ ಅಥವಾ ಉತ್ತರ ಕಾಶ್ಮೀರ (ಬಾಲ್ಟಾಲ್) ಮಾರ್ಗದಿಂದ ಗುಹೆ ದೇವಾಲಯವನ್ನು ತಲುಪುತ್ತಾರೆ.
ಪಹಲ್ಗಾಮ್-ಗುಹೆ ಮಾರ್ಗವು 48 ಕಿ.ಮೀ ಉದ್ದವಿದೆ ಮತ್ತು ಈ ಮಾರ್ಗದ ಮೂಲಕ ದೇವಾಲಯ ತಲುಪಲು ನಾಲ್ಕರಿಂದ ಐದು ದಿನ ಬೇಕಾಗುತ್ತವೆ. ಬಾಲ್ಟಾಲ್-ಗುಹೆ ಮಾರ್ಗವು 14 ಕಿ.ಮೀ ಉದ್ದವಿದೆ ಮತ್ತು ಈ ಮಾರ್ಗದ ಮೂಲಕ ಒಂದೇ ದಿನದಲ್ಲಿ ಗುಹೆಯನ್ನು ತಲುಪಿ, ದರ್ಶನ ಪಡೆದು ಅದೇ ದಿನ ಬೇಸ್ ಕ್ಯಾಂಪ್ಗೆ ಮರಳಿ ಬರಬಹುದು. ಪವಿತ್ರ ಅಮರನಾಥ ಗುಹೆಯಲ್ಲಿನ ಹಿಮಲಿಂಗದ ದರ್ಶನ ಪಡೆಯಲು ಪ್ರತಿದಿನ ಸರಾಸರಿ 8 ರಿಂದ 10 ಸಾವಿರ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಹೊಸೂರು ವಿಮಾನ ನಿಲ್ದಾಣದ ಸ್ಥಾಪನೆಗಾಗಿ ಭರದ ಸಿದ್ಧತೆ ನಡೆಸಿದ ತಮಿಳುನಾಡು ಸರ್ಕಾರ - Hosur Airport