ಶ್ರೀನಗರ : ಈ ವರ್ಷದ ಅಮರನಾಥ ಯಾತ್ರೆಯ ವಿಧ್ಯುಕ್ತ ಆರಂಭದ ಸಂಕೇತವಾಗಿ ಶನಿವಾರ 'ಪ್ರಥಮ ಪೂಜೆ' ನೆರವೇರಿಸಲಾಯಿತು. ಶ್ರೀ ಅಮರನಾಥ ದೇವಾಲಯ ಮಂಡಳಿಯ (ಎಸ್ಎಎಸ್ಬಿ) ಅಧ್ಯಕ್ಷರೂ ಆಗಿರುವ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, "ವಾರ್ಷಿಕ ಶ್ರೀ ಅಮರನಾಥ ಜಿ ಯಾತ್ರೆಯ ಔಪಚಾರಿಕ ಪ್ರಾರಂಭದ ಗುರುತಾದ 'ಪ್ರಥಮ ಪೂಜೆ'ಯನ್ನು ಇಂದು ನಡೆಸಲಾಯಿತು. ಬಾಬಾ ಅಮರನಾಥಜಿ ದೇವರ ಆಶೀರ್ವಾದವನ್ನು ಕೋರಿದೆ ಮತ್ತು ಎಲ್ಲರಿಗೂ ಉತ್ತಮ ಆರೋಗ್ಯ ನೀಡುವಂತೆ, ಎಲ್ಲರ ಪ್ರಗತಿ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದೆ" ಎಂದು ಬರೆದಿದ್ದಾರೆ.
ಹಿಮಾಲಯದಲ್ಲಿ ಸಮುದ್ರ ಮಟ್ಟದಿಂದ 3888 ಮೀಟರ್ ಎತ್ತರದಲ್ಲಿರುವ ಹಿಮಾಲಯದ ಗುಹಾ ದೇವಾಲಯದ ಪವಿತ್ರ ತೀರ್ಥಯಾತ್ರೆಯು ಕೋಮು ಸೌಹಾರ್ದತೆಯ ಸಂಕೇತವಾಗಿದೆ. ಇಲ್ಲಿನ ಸ್ಥಳೀಯ ಮುಸ್ಲಿಮರು ಯಾತ್ರಿಗಳಿಗೆ ಗುಹೆ ದೇವಾಲಯವನ್ನು ತಲುಪಲು ಸಹಾಯ ಮಾಡುತ್ತಾರೆ ಎಂದು ಅವರು ಹೇಳಿದರು.
"ಎಲ್ಲಾ ಸಮುದಾಯಗಳ ಜನರು ಧರ್ಮಾತೀತವಾಗಿ ಈ ಯಾತ್ರೆಯಲ್ಲಿ ಭಾಗವಹಿಸುವುದು ಜಮ್ಮು ಮತ್ತು ಕಾಶ್ಮೀರದ ಪ್ರಾಚೀನ ಸಂಪ್ರದಾಯವಾಗಿದೆ. ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಬರುವ ಯಾತ್ರಾರ್ಥಿಗಳನ್ನು ಸ್ವಾಗತಿಸಲು ಮತ್ತು ಸೇವೆ ಸಲ್ಲಿಸಲು ಎಲ್ಲಾ ನಾಗರಿಕರು ಒಗ್ಗೂಡಬೇಕೆಂದು ನಾನು ಕರೆ ನೀಡುತ್ತೇನೆ" ಎಂದು ಮನೋಜ್ ಸಿನ್ಹಾ ಕಮೆಂಟ್ ಮಾಡಿದ್ದಾರೆ.
ಬಾಬಾ ಬರ್ಫಾನಿಗೆ ಪ್ರಾರ್ಥನೆ ಸಲ್ಲಿಸಲು ವಾರ್ಷಿಕ ತೀರ್ಥಯಾತ್ರೆಗೆ ಸೇರುವ ಹಿಂದೂ ಭಕ್ತರ ಪಾಲಿಗೆ ಶ್ರೀ ಅಮರನಾಥ ಯಾತ್ರೆ ಅಪಾರ ಮಹತ್ವ ಹೊಂದಿದೆ. ಈ ವರ್ಷ, ತೀರ್ಥಯಾತ್ರೆ ಜೂನ್ 29 ರಂದು ಪ್ರಾರಂಭವಾಗಿ ಆಗಸ್ಟ್ 19 ರಂದು ಕೊನೆಗೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆ ದೇವಾಲಯಕ್ಕೆ ಕಠಿಣವಾದ ಚಾರಣದ ಮೂಲಕ ತಲುಪಬೇಕಾಗುತ್ತದೆ. ಶಿವನಿಗೆ ಪ್ರಾರ್ಥನೆ ಸಲ್ಲಿಸಲು ಪ್ರತಿವರ್ಷ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಕಳೆದ ವರ್ಷ 4.5 ಲಕ್ಷಕ್ಕೂ ಹೆಚ್ಚು ಭಕ್ತರು ಅಮರನಾಥ ದೇವಾಲಯದ ಪವಿತ್ರ ದರ್ಶನ ಪಡೆದಿದ್ದರು. ಈ ಪ್ರದೇಶದಲ್ಲಿ ಆಗಾಗ ಭಯೋತ್ಪಾದಕ ದಾಳಿಗಳು ನಡೆಯುವ ಹಿನ್ನೆಲೆಯಲ್ಲಿ ಅಮರನಾಥ ಯಾತ್ರಾರ್ಥಿಗಳ ಸುರಕ್ಷತೆಯು ಭದ್ರತಾ ಅಧಿಕಾರಿಗಳಿಗೆ ಬಹುದೊಡ್ಡ ಸವಾಲಾಗಿದೆ. ತೀರ್ಥಯಾತ್ರೆಯ ಅಧಿಕೃತ ಆರಂಭಕ್ಕೆ ಮುಂಚಿತವಾಗಿ, ಭದ್ರತಾ ಪಡೆಗಳು ಭಕ್ತರ ಸುರಕ್ಷತೆಗಾಗಿ ಮಾರ್ಗ ಮತ್ತು ಯಾತ್ರಾ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಿವೆ.
ಇದನ್ನೂ ಓದಿ : ಸಿಎಂ ಆಗಿಯೇ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು; ಡಿಸಿಎಂ ಹುದ್ದೆಯೊಂದಿಗೆ ರಾಜಕೀಯಕ್ಕೆ ಅಡಿಯಿಟ್ಟ ಪವನ್! - AP Assembly Session