ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ 2010ರ ನಂತರ ನೀಡಲಾದ ಎಲ್ಲ ಹಿಂದುಳಿದ ವರ್ಗಗಳ (ಒಬಿಸಿ) ಜಾತಿ ಪ್ರಮಾಣಪತ್ರಗಳನ್ನು ಕಲ್ಕತ್ತಾ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ. ನ್ಯಾಯಮೂರ್ತಿ ತಪಬ್ರತಾ ಚಕ್ರವರ್ತಿ ಮತ್ತು ನ್ಯಾಯಮೂರ್ತಿ ರಾಜಶೇಖರ್ ಮಂಥಾ ಅವರ ವಿಭಾಗೀಯ ಪೀಠ ಈ ತೀರ್ಪು ನಿಡಿದೆ. ತೀರ್ಪಿನಿಂದಾಗಿ 2011 ರಲ್ಲಿ ಅಧಿಕಾರಕ್ಕೆ ಬಂದ ಪ್ರಸ್ತುತ ತೃಣಮೂಲ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ನೀಡಲಾದ ಎಲ್ಲಾ ಒಬಿಸಿ ಜಾತಿ ಪ್ರಮಾಣಪತ್ರಗಳು ಈಗ ಅಸಿಂಧು ಆಗಲಿವೆ.
ಈ ಆದೇಶದ ನಂತರ, 2010 ರಿಂದ ನೀಡಲಾದ 5 ಲಕ್ಷಕ್ಕೂ ಹೆಚ್ಚು ಒಬಿಸಿ ಪ್ರಮಾಣಪತ್ರಗಳನ್ನು ಇನ್ನು ಮುಂದೆ ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಬಳಸುವಂತಿಲ್ಲ. ಆದಾಗ್ಯೂ, ಆ ಅವಧಿಯಲ್ಲಿ ನೀಡಲಾದ ಪ್ರಮಾಣಪತ್ರಗಳನ್ನು ಬಳಸಿಕೊಂಡು ಈಗಾಗಲೇ ಉದ್ಯೋಗಗಳನ್ನು ಪಡೆದವರಿಗೆ ವಿನಾಯಿತಿ ನೀಡಲಾಗಿದೆ. ಹೊಸ ಆದೇಶವು ಇವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ.
2010 ರ ನಂತರ ನೀಡಲಾದ ಪ್ರಮಾಣಪತ್ರಗಳನ್ನು ನಿಗದಿತ ಕಾನೂನುಗಳ ಕಾರ್ಯವಿಧಾನಗಳಿಗೆ ಅನುಗುಣವಾಗಿ ನೀಡದ ಕಾರಣ, ಅವುಗಳನ್ನು ರದ್ದುಪಡಿಸಲಾಗಿದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ. ಒಬಿಸಿ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂಬುದನ್ನು ರಾಜ್ಯ ವಿಧಾನಸಭೆ ಈಗ ನಿರ್ಧರಿಸಲಿ ಎಂದು ನ್ಯಾಯಪೀಠ ಸೂಚಿಸಿದೆ. ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಆಯೋಗವು ಈಗ ಒಬಿಸಿ ಪಟ್ಟಿಯಲ್ಲಿ ಸೇರಿಸಬಹುದಾದ ಜಾತಿ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಅಧಿಸೂಚನೆಯ ಮೂಲಕ ಅಧಿಕೃತ ಗೆಜೆಟ್ನಲ್ಲಿ ಒಬಿಸಿ ಮೀಸಲಾತಿಗಾಗಿ ವರ್ಗಗಳನ್ನು ಸೇರಿಸಲು ರಾಜ್ಯ ಸರ್ಕಾರದ 2012 ರ ಕಾಯ್ದೆಯ ಒಂದು ಷರತ್ತನ್ನು ಸಹ ನ್ಯಾಯಾಲಯ ಇದೇ ಸಂದರ್ಭದಲ್ಲಿ ರದ್ದುಪಡಿಸಿದೆ.
ನಿಯಮದ ಪ್ರಕಾರ, ಆಯೋಗವು ಪಟ್ಟಿಯನ್ನು ಶಿಫಾರಸು ಮಾಡುತ್ತದೆ ಮತ್ತು ಅದನ್ನು ರಾಜ್ಯ ವಿಧಾನಸಭೆಗೆ ಕಳುಹಿಸುತ್ತದೆ. ನಂತರ ವಿಧಾನಸಭೆಯು ಪಟ್ಟಿಯನ್ನು ಅಂತಿಮಗೊಳಿಸಬೇಕಿದೆ. ಈ ಹಿಂದೆ, ಪಶ್ಚಿಮ ಬಂಗಾಳದಲ್ಲಿ ಒಬಿಸಿ ಪ್ರಮಾಣಪತ್ರಗಳನ್ನು ನೀಡುವಲ್ಲಿ ಬಹಳಷ್ಟು ಅಕ್ರಮಗಳು ನಡೆದಿವೆ ಎಂಬ ದೂರು ಬಂದಿವೆ. ಪ್ರಮಾಣ ಪತ್ರ ನೀಡುವಲ್ಲಿನ ಅಕ್ರಮಗಳಿಂದ ಹಲವಾರು ಅರ್ಹ ಅಭ್ಯರ್ಥಿಗಳು ಪ್ರಮಾಣಪತ್ರಗಳಿಂದ ಹಾಗೂ ನೌಕರಿಗಳಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸುದ್ದಿಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೈಕೋರ್ಟ್ ತೀರ್ಪನ್ನು ಪಾಲಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನನ್ನ ಮಾನಹಾನಿಗೆ ಯತ್ನ: ಆಪ್ ವಿರುದ್ಧ ಮತ್ತೆ ಸಿಡಿದ ಸ್ವಾತಿ ಮಲಿವಾಲ್ - Swati Maliwal Assault Case