ಮುಂಬೈ(ಮಹಾರಾಷ್ಟ್ರ): ಮುಂಬರುವ ರಾಜ್ಯಸಭಾ ಚುನಾವಣೆಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಗುರುವಾರ ಎನ್‌ಸಿಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇತ್ತೀಚಿಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಸುನೇತ್ರಾ ಪವಾರ್ ಪುಣೆಯ ಜಿಲ್ಲೆಯ ಬಾರಾಮತಿ ಕ್ಷೇತ್ರದಲ್ಲಿ ಸೋತಿದ್ದರು.
ಮಹಾರಾಷ್ಟ್ರ, ಅಸ್ಸಾಂ, ಬಿಹಾರದ ತಲಾ ಎರಡು ಮತ್ತು ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತ್ರಿಪುರಾದಲ್ಲಿ ತಲಾ ಒಂದು ಸೇರಿದಂತೆ ಸಂಸತ್ತಿನ ಮೇಲ್ಮನೆಯ ಹತ್ತು ಖಾಲಿಯಿರುವ ಸದಸ್ಯರ ಸ್ಥಾನಗಳಿಗೆ ರಾಜ್ಯಸಭೆಯ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.
ಇದರ ಬೆನ್ನಲ್ಲೇ, ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ವೇಳೆ, ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್, ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ಲೋಕಸಭೆಯ ಸಂಸದ ಸುನೀಲ್ ತಟ್ಕರೆ ಮತ್ತು ವಿಧಾನಸಭೆಯ ಉಪಸಭಾಪತಿ ನರಹರಿ ಜಿರ್ವಾಲ್ ಮುಂತಾದ ಹಿರಿಯ ನಾಯಕರು ಉಪಸ್ಥಿತರಿದ್ದರು.
ಸಚಿವ, ಹಿರಿಯ ಎನ್‌ಸಿಪಿ ನಾಯಕ ಛಗನ್ ಭುಜಬಲ್ ಸುದ್ದಿಗಾರರೊಂದಿಗೆ ಮಾತನಾಡಿ, ''ರಾಜ್ಯಸಭಾ ಚುನಾವಣೆಗೆ ಸುನೇತ್ರಾ ಪವಾರ್ ಅವರನ್ನು ಕಣಕ್ಕಿಳಿಸಲು ಎನ್‌ಸಿಪಿ ನಿರ್ಧರಿಸಿದೆ. ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೆ. ಆದರೆ, ಬುಧವಾರ ಸಂಜೆ ನಡೆದ ಸಭೆಯಲ್ಲಿ ಪಕ್ಷದ ಮುಖಂಡರು ಸುನೇತ್ರಾ ಹೆಸರನ್ನು ಅಂತಿಮಗೊಳಿಸಿದ್ದಾರೆ'' ಎಂದು ತಿಳಿಸಿದರು.
ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸದಿದ್ದಕ್ಕಾಗಿ ನೀವು ನಿರಾಶೆಗೊಂಡಿದ್ದೀರಾ ಎಂಬ ಪ್ರಶ್ನೆಗೆ ಭುಜಬಲ್, ''ಪಕ್ಷದ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಮತ್ತು ಕೆಲವು ಒತ್ತಾಯಗಳೂ ಇರುತ್ತವೆ. ನಾನು ಸ್ವತಂತ್ರ ವ್ಯಕ್ತಿಯಲ್ಲ. ಪಕ್ಷದ ಕಾರ್ಯಕರ್ತ ಮತ್ತು ಓರ್ವ ನಾಯಕಯಷ್ಟೇ'' ಎಂದರು.
ನಾದಿನಿ ಸುಪ್ರಿಯಾ ವಿರುದ್ಧ ಸೋತಿದ್ದ ಸುನೇತ್ರಾ: ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ ಇಬ್ಬರು ಹಾಲಿ ರಾಜ್ಯಸಭಾ ಸದಸ್ಯರಾಗಿದ್ದ ಬಿಜೆಪಿ ನಾಯಕರಾದ ಪಿಯೂಷ್ ಗೋಯಲ್ ಮತ್ತು ಉದಯನರಾಜೆ ಭೋಂಸ್ಲೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಈ ಸ್ಥಾನಗಳು ತೆರವಾಗಿವೆ. ನೂತನ ರಾಜ್ಯಸಭಾ ಸದಸ್ಯರನ್ನು ಶಾಸಕರು ಆಯ್ಕೆ ಮಾಡಲಿದ್ದಾರೆ.
ಮತ್ತೊಂದೆಡೆ, ಸುನೇತ್ರಾ ಪವಾರ್ ತಮ್ಮ ಸ್ವತಃ ನಾದಿನಿಯಾದ ಸುಪ್ರಿಯಾ ಸುಳೆ ವಿರುದ್ಧ ಬಾರಾಮತಿ ಲೋಕಸಭೆ ಕ್ಷೇತ್ರದಲ್ಲಿ ಸೋಲುಂಡಿದ್ದರು. ಶರದ್ ಪವಾರ್ ಪುತ್ರಿಯಾದ ಸುಪ್ರಿಯಾ ಸುಳೆ ಸತತ ನಾಲ್ಕನೇ ಗೆಲುವು ಬಾರಿಗೆ ದಾಖಲಿಸಿದ್ದಾರೆ. ಸುನೇತ್ರಾ ಪತಿ ಅಜಿತ್ ಪವಾರ್ ಅವರು ಸಂಬಂಧದಲ್ಲಿ ಶರದ್ ಪವಾರ್ ಅವರಿಗೆ ಪುತ್ರರಾಗಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಎಲ್ಲ ಶಾಲೆಗಳಲ್ಲಿ ರಾಷ್ಟ್ರಗೀತೆ ಗಾಯನ ಕಡ್ಡಾಯ: ಶಿಕ್ಷಣ ಇಲಾಖೆ ಸುತ್ತೋಲೆ